ಬಾಡೂಟಕ್ಕೆ ಬಂದಿದ್ದ ಬಂಧು-ಮಿತ್ರರಿಂದ ತುಂಬಿದ ಗ್ರಾಮ
ಮಲೇಬೆನ್ನೂರು, ಏ. 3 – ಹಾಲಿವಾಣ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ ಮತ್ತು ಬುಧವಾರ ಸಂಭ್ರಮದಿಂದ ಜರುಗಿತು.
ಮಂಗಳವಾರ ತಡರಾತ್ರಿ ಆರಂಭವಾದ ಮೆರವಣಿಗೆಯು ಬುಧವಾರ ಬೆಳಗಿನ ಜಾವ ದೇವಸ್ಥಾನಕ್ಕೆ ವೈಭವದೊಂದಿಗೆ ಬಂದು ನೆಲೆಗೊಂಡಿತು. ನಂತರ ಓಕುಳಿ ತುಂಬಿದ ಹಿಟ್ಟಿನ ಕೋಣಗಳ ಬಲಿದಾನ ನೆರವೇರಿಸಿ, ಬೆಳಿಗ್ಗೆ 6 ಗಂಟೆಗೆ ಗ್ರಾಮದಲ್ಲಿ ಚರಗ ಹಾಕಲಾಯಿತು. ಬೆಳಿಗ್ಗೆಯಿಂದ ಸಂಜೆಯವರೆಗೂ ಭಕ್ತರು ಭೇವಿನ ಉಡುಗೆ, ದೀಡು ನಮಸ್ಕಾರ, ಬಾಯಿ ಬೀಗ, ಜವಳ ಕಾಯಿತೂಕ, ಉರುಳು ಸೇವೆ ಸೇರಿದಂತೆ ಇತ್ಯಾದಿ ಹರಕೆ ಸೇವೆಗಳನ್ನು ದೇವಿಗೆ ಅರ್ಪಿಸಿದರು. ಬುಧವಾರ ಕೂಡಾ ಮಹಿಳೆಯರು ಅಮ್ಮನಿಗೆ ಉಡಿ ತುಂಬಿ ಭಕ್ತಿ ಸಮರ್ಪಿಸಿದರು.
ಬಾಡೂಟ : ಬುಧವಾರ ಮಧ್ಯಾಹ್ನದಿಂದಲೇ ಗ್ರಾಮದ ಹಾಗೂ ಗ್ರಾಮದ ಸುತ್ತ-ಮುತ್ತ, ತೋಟ-ಗದ್ದೆಗಳಲ್ಲಿ ಹೊರಗಿನ ಭಕ್ತರು ಹಾಕಿದ್ದ ಬೀಡಾಗಳಲ್ಲಿ ಬಾಡೂಟದ ಸಂಭ್ರಮ ಜೋರಾಗಿತ್ತು.
ಸಂಜೆ 7ರಿಂದ ರಾತ್ರಿ 11 ರವರೆಗೂ ಹಾಲಿವಾಣ ಗ್ರಾಮದ ಬಾಡೂಟಕ್ಕೆ ಬಂದಿದ್ದ ಬಂಧು-ಮಿತ್ರರಿಂದ ತುಂಬಿ ತುಳುಕಿತು. ಸುಮಾರು 3 ತಾಸು ಟ್ರಾಫಿಕ್ ಜಾಮ್ ಅಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಜನ ವಾಹನಗಳಲ್ಲಿ ಕಾಲ ಕಳೆಯುವಂತಾಯಿತು. ಟ್ರಾಫಿಕ್ ಜಾಮ್ ತೆರವುಗೊಳಿಸಲು ಪೋಲೀಸರು ಹರಸಾಹಸ ಪಟ್ಟರು. ಗುರುವಾರ ಕೂಡಾ ಬಾಡೂಟ ನಡೆಯಲಿದೆ.
ಸಿಡಿ ಉತ್ಸವ : ಗುರುವಾರ ಸಾಯಂಕಾಲ 4 ಗಂಟೆಗೆ ಸಿಡಿ ಉತ್ಸವ ನಡೆಯಲಿದ್ದು. ರಾತ್ರಿ 8 ಗಂಟೆಗೆ ಭದ್ರಾವತಿಯ ಚಂದನ ಮ್ಯೂಜಿಕಲ್ ನೈಟ್ಸ್ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶುಕ್ರವಾರ ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಸಾಯಂಕಾಲ 4 ರಿಂದ ಚಿಲ್ಲದ ಬಂಡಿ ಉತ್ಸವ ಓಕುಳಿ ಮತ್ತು ಸಂಜೆ 6 ಗಂಟೆಗೆ ದೇವಿಗೆ ಮಹಾಮಂಗಳಾರತಿ ನೆರವೇರಿಸಿ ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುವುದು ಎಂದು ಜಾತ್ರಾ ಸಮಿತಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ ತಿಳಿಸಿದ್ದಾರೆ.