ಹರಪನಹಳ್ಳಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ವಿಶ್ಲೇಷಣೆ
ಹರಪನಹಳ್ಳಿ, ಮಾ. 29 – ಹೆಣ್ಣು ಸಮಾಜದ ಕಣ್ಣು, ಸಮಾಜದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಆದ್ದರಿಂದ ಸಮಾಜದಲ್ಲಿ ಹೆಣ್ಣು ಕೂಡ ಪುರುಷರಷ್ಟೇ ಸಮಾನಳು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಎಂ. ಭಾರತಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ರುವ ತಾಲ್ಲೂಕು ವಕೀಲರ ಸಂಘದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ, ಸಾವಿತ್ರಿಬಾಯಿ ಬಾಫುಲೆರವರ ಭಾವ ಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಬಳಿಕ ಮಾತನಾಡಿದ ಅವರು, ಮಹಿಳಾ ದಿನಾಚರಣೆಯನ್ನು ಸುಸ್ಥಿರ ನಾಳೆಗಾಗಿ ಸಮಾನತೆ ಎನ್ನುವ ಧ್ಯೇಯವಾಕ್ಯ ದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ಬೆರಳಣಿಕೆಯಷ್ಟು ಮಹಿಳೆಯರು ಮಾತ್ರ ಮನೆಯಿಂದ ಹೊರಬಂದು ದುಡಿಯುತ್ತಿದ್ದರು, ಆದರೆ ಪ್ರಸ್ತುತ ಗಡಿ ಕಾಯುವುದರಿಂದ ಹಿಡಿದು ಕುಟುಂಬದ ಪ್ರತಿಯೊಂದು ಕೆಲಸವನ್ನೂ ಅತ್ಯಂತ ಸಮರ್ಥವಾಗಿ ನಿರ್ವಹಿಸುವ ಶಕ್ತಿ, ತಾಳ್ಮೆ, ಉತ್ಸಾಹ, ಮಹಿಳೆಗಿದೆ. ಆದರೆ ಇದರ ಮಧ್ಯೆಯೂ ಕೌಟುಂಬಿಕ ದೌರ್ಜನ್ಯಕ್ಕೆ ಹಲವು ಮಂದಿ ಮಹಿಳೆಯರು ಬಲಿಯಾಗುತ್ತಿದ್ದು, ಅವರಿಗೆ ಧೈರ್ಯ ನೀಡಿ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ಮಾತನಾಡಿ, ಹೆಣ್ಣು ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ ಯಾಗಿದ್ದಾಳೆ. ಕಷ್ಟದ ದಿನಗಳನ್ನು ಎದುರಿಸಿ ನಿಂತ ಮಹಿಳೆಯ ಸ್ಥೈರ್ಯದ ವಿವರಣೆಗೆ ಬೇರೆ ಪದಗಳು ಬೇಕಿಲ್ಲ ಎಂದು ತಮ್ಮ ವಿದ್ಯಾರ್ಥಿ ಜೀವನದ ಬಗ್ಗೆ ಮತ್ತು ವೃತ್ತಿ ಜೀವನದ ಬಗ್ಗೆ ಶ್ಲ್ಯಾಘಿಸಿದರು.
ಹೆಣ್ಣು ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಎಲ್ಲಾ ಪಾತ್ರಗಳನ್ನು ತುಂಬುವ ಮಹಿಳೆಯ ಸಾಮರ್ಥ್ಯ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಮತ್ತು ಅವಳನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ನಾಗರಿಕ ಸಮಾಜದ ಮುಖ್ಯ ಗುಣವಾಗಬೇಕು. ಮಹಿಳೆಯರು ಸಂವಿಧಾನ ನೀಡಿರುವ ಹಕ್ಕುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಸಿ. ಪೀರ್ ಅಹಮ್ಮದ್ , ಕಾರ್ಯದರ್ಶಿ ಜಿ.ಎಸ್.ಎಂ. ಕೊಟ್ರಯ್ಯ, ಸರ್ಕಾರಿ ಅಭಿಯೋಜಕಿಯರಾದ ಮೀನಾಕ್ಷಿ, ಎನ್. ಡಿ. ನಿರ್ಮಲ ಮತ್ತು ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಹಾಗೂ ಉಭಯ ನ್ಯಾಯಾಲಯದ ಸಿಬ್ಬಂದಿಗಳು ಇದ್ದರು.