ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಭಿಮತ
ದಾವಣಗೆರೆ, ಮಾ.29- ಸಾಹಿತ್ಯ ಇದ್ದಲ್ಲಿ ಸಹೃದಯತೆ ಇರುತ್ತದೆ ಎನ್ನುವ ಮಾತು ಜನಜನಿತ. ಸಾಹಿತ್ಯದ ಮನಸ್ಸುಗಳು ಏನನ್ನಾದರೂ ಯಶಸ್ವಿಯಾಗಿ ಸಾಧಿಸಬಲ್ಲವು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ, ಸ್ಫೂರ್ತಿ ಪ್ರಕಾಶನ ತೆಲಿಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಕವಿಗೋಷ್ಠಿ-ಕ್ರೋಧಿ ನಾಮ ಸಂವತ್ಸರದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸಾಹಿತ್ಯ ರಚನೆಯಾಗಿರಲಿ ಅದಕ್ಕೆ ಲಿಪಿ ಕೊಟ್ಟರೆ ಅದೆಲ್ಲವೂ ಸಾಹಿತ್ಯ ಆಗಲಿದೆ. ವಿಜ್ಞಾನದ ಕ್ಷೇತ್ರಕ್ಕೆ ಸಂಬಂಧಿಸಿದ ಸಾಹಿತ್ಯ ರಚನೆ ಮಾಡಿದರೆ ವಿಜ್ಞಾನ ಸಾಹಿತ್ಯವಾಗಲಿದೆ. ಮಕ್ಕಳ ಮಾತುಗಳನ್ನು ಸಾಹಿತ್ಯ ಕೃಷಿ ಮಾಡಿದರೆ ಮಕ್ಕಳ ಸಾಹಿತ್ಯವಾಗಲಿದೆ. ಬಂಡಾಯದ ರೂಪದಲ್ಲಿ ರಚಿಸಿದರೆ ಬಂಡಾಯ ಸಾಹಿತ್ಯವಾಗಲಿದೆ, ಚುಟುಕಾಗಿ ರಚನೆ ಮಾಡಿದರೆ ಅದು ಚುಟುಕು ಸಾಹಿತ್ಯವಾಗಲಿದೆ. ಒಟ್ಟಾರೆ ಕನ್ನಡ ಸಾಹಿತ್ಯ ಪರಿಷತ್ ಎಲ್ಲಾ ಸಂಘ-ಸಂಸ್ಥೆಗಳಿಗೆ ಮಾತೃ ಸ್ಘಾನದಲ್ಲಿ ನಿಂತು ಕೆಲಸ ಮಾಡುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕೇವಲ ನಾಡಿಗೆ ಸೀಮಿತವಾಗದೇ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ತನ್ನದೇ ಛಾಪು ಮೂಡಿಸಿದೆ. ತನ್ನದೇ ಆದ ಸಂದೇಶಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಯುಗದ ಆದಿಯನ್ನು ನಾವೆಲ್ಲರೂ ಸ್ವಾಗತಿಸೋಣ ಎಂದು ಹೇಳಿದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಹೆಚ್. ರಾಜಶೇಖರ್ ಗುಂಡಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್. ವೀರಭದ್ರಪ್ಪ ತೆಲಿಗಿ, ರಾಮಚಂದ್ರಪ್ಪ, ಹೆಚ್.ವಿ. ಮಂಜುನಾಥಸ್ವಾಮಿ, ಮಾರುತಿ ಶಾಲಿಮನಿ, ಮಾಗಾನಹಳ್ಳಿ ಎಂ. ಬಸವರಾಜ್, ಸುನೀತ ಪ್ರಕಾಶ್, ಸುಶೀಲ ಬಸವರಾಜ್, ಅಣಬೇರು ಕೆ.ಪಿ. ತಾರೇಶ್, ಉಮಾದೇವಿ ಹಿರೇಮಠ, ಲಲಿತ್ ಕುಮಾರ್ ಜೈನ್, ಪಕ್ಕೀರೇಶ್ ಆದಾಪುರ ಮತ್ತಿತರರು ಭಾಗವಹಿಸಿದ್ದರು.