ಹರಿಹರ, ಮಾ.25- ಕೈವಾರ ತಾತಯ್ಯನವರು ಸಮಾಜ ಸುಧಾರಕರಾಗಿದ್ದು, ಅವರು ತೋರಿದ ಸನ್ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕಿದೆ ಎಂದು ಬಲಿಜ ಸಮಾಜದ ಮುಖಂಡ ಹಾಗೂ ಮುಖ್ಯೋಪಾಧ್ಯಾಯ ವಿ.ನಾಗೇಂದ್ರಪ್ಪ ಹೇಳಿದರು.
ಇಲ್ಲಿನ ತಹಶೀಲ್ದಾರ್ ಕಛೇರಿಯಲ್ಲಿ ತಾಲ್ಲೂಕು ಆಡಳಿತ ಮತ್ತು ಹರಿಹರ ತಾಲೂಕು ಬಲಿಜ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾತಯ್ಯ ಅವರು ರಚಿಸಿದ ಕಾಲಜ್ಞಾನದಲ್ಲಿ ಜಗತ್ತು ಅರಿಯಬೇಕಾದ ಅಂಶಗಳಿವೆ ಮತ್ತು ಅವರ ತತ್ವ, ಅಧ್ಯಾತ್ಮ ಚಿಂತನೆ, ತೋರಿದ ಮಾರ್ಗದರ್ಶನ ಪಾಲಿಸಿದಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ಇಂತಹ ಮಹಾತ್ಮರ ಜಯಂತಿಯನ್ನು ಜಾತಿ ಮತ ಭೇದವಿಲ್ಲದೇ ಆಚರಿಸವಂತಾಗಬೇಕೆಂದರು.
ಯೋಗಿ ನಾರೇಯಣ ಯತೀಂದ್ರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಲಿಜ ಸಂಘದ ಅಧ್ಯಕ್ಷ ಎಂ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಪ್ಪರ ಹನುಮಂತಪ್ಪ ಕೈವಾರ ತಾತಯ್ಯನವರ ಕೀರ್ತನೆ ಹಾಡಿದರು.
ಗ್ರೇಡ್ -2 ತಹಶೀಲ್ದಾರ್ ಬಿ.ಎಂ.ಶಶಿಧರಯ್ಯ, ಶಿರಸ್ತೇದಾರ್ ಸುನೀತಾ ಮತ್ತು ಜಿಲ್ಲಾ ಬಲಿಜ ಸಂಘದ ಪೈರ್ ಮಂಜಣ್ಣ, ಎಂ.ಎನ್.ವೆಂಕಟೇಶ್, ಸಿರಿಗೆರೆ ಬಲಿಜ ಸಂಘದ ಅಧ್ಯಕ್ಷ ಮಲ್ಲಾಡ ಕೃಷ್ಣಪ್ಪ ಹಾಗೂ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಮುಂತಾದವರು ಈ ವೇಳೆ ಇದ್ದರು.