ನೂತನ ಕಾಲೇಜಿನ ಕಾರ್ಯಕ್ರಮದಲ್ಲಿ ಸ.ಪ್ರ.ದ. ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ದಾದಾಪೀರ್ ನವಿಲೇಹಾಳ್
ದಾವಣಗೆರೆ, ಮಾ.24- ಅಧ್ಯಾಪಕನ ನಿಜವಾದ ಸಂಗಾತಿ ಪುಸ್ತಕಗಳಾಗಿರಬೇಕು. ಶಿಕ್ಷಣವು ವಿವೇಕತನದಿಂದ ಕೂಡಿರಬೇಕು. ಶಿಕ್ಷಕರು ಮೌಲ್ಯಗಳ ಪ್ರವರ್ತಕರಾಗಿರಬೇಕು ಮತ್ತು ವಾಹಕರಾಗಿರಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ದಾದಾಪೀರ್ ನವಿಲೇಹಾಳ್ ಅವರು ತಿಳಿಸಿದರು.
ಅವರು, ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದ 2023-24ನೇ ಸಾಲಿನ ಬಿ.ಇಡಿಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕರಾದವರು ವಿದ್ಯಾರ್ಥಿಗಳ ವಿಶೇಷತೆ ಮತ್ತು ಸಾಮರ್ಥ್ಯವನ್ನು ಗುರುತಿಸುವಂತಹ ಲಕ್ಷಣ ಹೊಂದಿರಬೇಕೆಂದು ದಾದಾಪೀರ್ ಅವರು ಪ್ರಕ್ಷಿಣಾರ್ಥಿಗಳಿಗೆ ಸಲಹೆ ನೀಡಿದರು.
ದಾವಣಗೆರೆ ವಿವಿ ಸ್ನಾತಕೋತ್ತರ ಶಿಕ್ಷಣ ಮತ್ತು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಕೆ.ವೆಂಕಟೇಶ್ ಅವರು, ಸನ್ಮಾನ ಸ್ವೀಕರಿಸಿ ಮಾತನಾಡಿ, ಓದು ಬರಹ ಅತ್ಯಂತ ಮುಖ್ಯವಾದದ್ದು, ಶಿಕ್ಷಕರು ಓದು ಬರಹವನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ. ಶಿಕ್ಷಕರೆಲ್ಲಾ ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಬೆಳವಣಿಗೆ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಪರಶುರಾಮಗೌಡ ಮಾತನಾಡಿ, ಶಿಕ್ಷಕ ವೃತ್ತಿಯ ಬಗ್ಗೆ ಅಭಿಮಾನವಿರಬೇಕು ಮತ್ತು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎಸ್. ದಿವಾಕರ್ ನಾಯ್ಕ್ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಪ್ರಶಿಕ್ಷಣಾರ್ಥಿಗಳಾದ ಕು. ಎಂ.ಎಂ.ರಕ್ಷಿತಾ ಮತ್ತು ಎಂ.ಕೆ.ಪೂಜಾ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಡಿ.ಮಂಜುಳಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಕೆ.ಹನುಮಂತಪ್ಪ ವಂದಿಸಿರು.