ಹರಿಹರ, ಮಾ.22- ತಾಲ್ಲೂಕಿನಲ್ಲಿ ಅಧಿಕ ಲೀಡ್ ದೊರೆಯಲಿದ್ದು, ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಪ್ರಭಾ ಮಲ್ಲಿಕಾರ್ಜುನ್ ರವರಿಗೆ ಪಕ್ಷವು ಅಧಿಕೃತ ವಾಗಿ ಟಿಕೆಟ್ ಘೋಷಣೆ ಮಾಡಿದೆ. ಪ್ರಭಾ ಮಲ್ಲಿಕಾರ್ಜುನ್ ಅವರು ಈ ಹಿಂದೆ ಹಲವು ಚುನಾವಣೆ ಗಳ ಕ್ಷೇತ್ರದಲ್ಲಿ ಓಡಾಡುವ ಮೂಲಕ ಚಿರಪರಿಚಿತರಾಗಿದ್ದಾರೆ.
ಕಳೆದ ಬಾರಿ ಲೋಕಸಭೆ ಚುನಾವಣೆ ಯಲ್ಲಿ ಮಲ್ಲಿಕಾರ್ಜುನ್ ಕೇವಲ ಎರಡೂ ವರೆ ಸಾವಿರ ಮತಗಳ ಅಂತರದಿಂದ ಸೋತರು. ಆ ಸಮಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಕೆಲವರು ಮಾಡಿದ ತಂತ್ರದಿಂದ ಸೋಲುವಂತಾಯಿತು. ಆ ಸಮಯದಲ್ಲಿ ಕೂಡ ತಮ್ಮ ಪತಿ ಮಲ್ಲಿಕಾರ್ಜುನ್ ಪರವಾಗಿ ಜಿಲ್ಲೆಯಲ್ಲಿ ಓಡಾಟ ಮಾಡಿ ಕಾಂಗ್ರೆಸ್ ಪಕ್ಷದ ಹೆಚ್ಚು ಮತಗಳನ್ನು ಪಡೆಯುವ ನಿಟ್ಟಿನಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ ಅವರು ಜಿಲ್ಲೆಯ ಜನರಿಗೆ ಗೊತ್ತಿಲ್ಲದೇ ಇರುವಂತಹ ವ್ಯಕ್ತಿಗಳಾಗಿದ್ದಾರೆ ಮತ್ತು ಅವರ ಪತಿ ಜಿ.ಎಂ. ಸಿದ್ದೇಶ್ವರ ಅವರು 20 ವರ್ಷ ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದಿಲ್ಲ. ಇನ್ನೂ ಪ್ರಧಾನಿ ನರೇಂದ್ರ ಮೋದಿಯವರೂ ಸಹ ಯುವಕರಿಗೆ ಉದ್ಯೋಗಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ ಎಂದರು.
ವಿರೋಧ ಪಕ್ಷದ ಕೆಲವರು ಕಾಂಗ್ರೆಸ್ ಪಕ್ಷ ಶಾಮನೂರು ಕುಟುಂಬಕ್ಕೇ ಟಿಕೆಟ್ ನೀಡಿದೆ ಎಂದು ಹೇಳುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮತ್ತು ಹೆಚ್.ಡಿ. ದೇವೇಗೌಡ್ರು ಮಕ್ಕಳು, ಮೊಮ್ಮಕ್ಕಳು ಸಂಸದರು ಆಗಿ ಕುಟುಂಬ ರಾಜಕೀಯ ಮಾಡುತ್ತಿಲ್ಲವೇ ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಆಗಿದ್ದ ಜಿ.ಬಿ. ವಿನಯಕುಮಾರ್ ಪಕ್ಷೇತರರಾಗಿ ಸ್ಪರ್ಧೆ ಮಾಡುವುದು ಅಷ್ಟು ಸುಲಭವಲ್ಲ. ಅವರು ಒಂದು ವೇಳೆ ಸ್ಪರ್ಧೆ ಮಾಡಿದರೂ ಸಹ ನಮ್ಮ ಹಾಲುಮತ ಸಮಾಜದವರು ಅವರ ಹಿಂದೆ ಹೋಗುವುದಿಲ್ಲ. ಕಾರಣ ಹಿಂದೆ ಚೆನ್ನಯ್ಯ ಒಡೆಯರ್ಗೆ ಟಿಕೆಟ್ ಸಿಗದೇ, ಪಕ್ಷೇತರರಾಗಿ ಸ್ಪರ್ಧೆ ಮಾಡಿದಾಗಲೂ ಹಾಲಮತ ಸಮಾಜದವರು ಅವರನ್ನು ಬೆಂಬಲಿಸದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಮತವನ್ನು ಹಾಕಿದ್ದರು. ಈ ಬಾರಿ ಕೂಡ ಹಾಗೆಯೇ ಆಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸುರೇಶ್ ಹಾದಿಮನಿ, ತಾಪಂ ಸದಸ್ಯ ಗುತ್ತೂರು ಜಿ.ಬಿ. ಹಾಲೇಶಗೌಡ, ಎಪಿಎಂಸಿ ಮಾಜಿ ಮಾಜಿ ಅಧ್ಯಕ್ಷ ಕುಮಾರನಹಳ್ಳಿ ಮಂಜುನಾಥ್ ಪಾಟೀಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮಹಮ್ಮದ್ ಫೈರೋಜ್, ಅಶೋಕ ಮೇಷ್ಟ್ರು, ವಿದ್ಯಾ ಗಡ್ಡದ್, ನೇತ್ರಾವತಿ ಪ್ಯಾಟಿ, ಕುಂಬಳೂರು ವಾಸು, ಕೃಷ್ಣಪ್ಪ ಇತರರು ಹಾಜರಿದ್ದರು.