ಹರಿಹರ, ಮಾ. 21 – ನಗರದ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಜಿಲ್ಲಾ ಆಡಳಿತ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಗ್ರಹಿಸಿ ನಗರ ಸಭೆಯ ಸದಸ್ಯ ದಾದಾ ಖಲಂದರ್ ಖಾಲಿ ಕೊಡಗಳನ್ನು ನಗರಸಭೆ ಮುಂಭಾಗದಲ್ಲಿ ಪ್ರದರ್ಶಿಸುವುದರ ಮೂಲಕ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ನಗರದಲ್ಲಿ ಕಳೆದ 4-5 ದಿನಗಳಿಂದ ಜನತೆಗೆ ನೀರು ಸರಬರಾಜು ಮಾಡದೇ ಇರುವುದರಿಂದ ಜನರು ನೀರಿನ ಬವಣೆಯಿಂದ ತತ್ತರಿಸಿ ಹೋಗಿದ್ದಾರೆ ಎಂದು ಹೇಳಿದರು.
ಪೌರಾಯುಕ್ತ ಐಗೂರು ಬಸವರಾಜ್ ಮಾತನಾಡಿ, ಶಾಸಕ ಬಿ.ಪಿ. ಹರೀಶ್ ಸಮ್ಮುಖದಲ್ಲಿ ನಿನ್ನೆ ಜಿಲ್ಲಾಧಿಕಾರಿಗಳಿಗೆ ವಾರ್ಡಿಗೊಂದು ಟ್ಯಾಂಕರ್ ಮತ್ತು ವಾರ್ಡಿಗೊಂದು ಹೊಸದಾಗಿ ಬೋರ್ವೆಲ್ ಕೊರೆಸುವುದಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮನವಿಗೆ ಸ್ಪಂದಿಸುವ ಮೂಲಕ ಶೀಘ್ರದಲ್ಲಿ 5 ಬಾಡಿಗೆಗೆ ನೀರಿನ ಟ್ಯಾಂಕರ್ ಪಡೆದು ನೀರು ಸರಬರಾಜು ಮಾಡುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದನ್ವಯ ತಕ್ಷಣವೇ ಐದು ನೀರಿನ ಟ್ಯಾಂಕರ್ ಬಾಡಿಗೆ ಪಡೆದು ಸಮರ್ಪಕವಾಗಿ ನೀರು ಕೊಡುವ ಕೆಲಸವನ್ನು ಮಾಡಲಾಗುತ್ತದೆ. ಇದರ ಜೊತೆಗೆ ಈಗಾಗಲೇ ಜನತೆಗೆ ನೀರಿನ ಸಮಸ್ಯೆ ಬರದಂತೆ 260 ಬೋರ್ವೆಲ್ ಮೂಲಕ ಮತ್ತು 14 ಶುದ್ದ ಕುಡಿಯವ ನೀರಿನ ಶುದ್ದೀಕರಣ ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದು ಪೌರಾಯುಕ್ತರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ದಾದಾಪೀರ್ ಭಾನುವಳ್ಳಿ, ನಗರಸಭೆ ನಾಮನಿರ್ದೇಶನ ಸದಸ್ಯರು, ನಗರಸಭೆ ಎಇಇ ತಿಪ್ಪೇಸ್ವಾಮಿ, ವಿವಿಧ ಬಡಾವಣೆ ನಿವಾಸಿಗಳು, ಇತರರು ಹಾಜರಿದ್ದರು.