ಜಂಗಮರು ತಮ್ಮ – ತಮ್ಮ ಮನೆಗಳಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜಾ ಕೈಕಾರ್ಯಗಳನ್ನು ನಡೆಸಬೇಕು.
-ಎಂ. ಪಂಚಾಕ್ಷರಯ್ಯ, ಅಧ್ಯಕ್ಷರು, ತಾಲ್ಲೂಕು ಬೇಡ ಜಂಗಮ ಸಂಘ, ಹೊನ್ನಾಳಿ
ಹೊನ್ನಾಳಿ, ಮಾ. 20 – ಲೋಕಸಭಾ ಚುನಾವಣೆ ಪ್ರಯುಕ್ತ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಕಾರಣ ನಾಡಿದ್ದು ದಿನಾಂಕ 23ರ ಶನಿವಾರ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಸರಳ ಹಾಗೂ ಸಂಕ್ಷಿಪ್ತವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಹೊನ್ನಾಳಿ ತಾಲ್ಲೂಕು ಬೇಡ ಜಂಗಮ ಸಂಘದ ಅಧ್ಯಕ್ಷ ಎಂ. ಪಂಚಾಕ್ಷರಯ್ಯ ಹೇಳಿದರು.
ಅವರು ಬುಧವಾರ ಪಟ್ಟಣದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಈ ಬಾರಿಯ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮವನ್ನು ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ತಾಲ್ಲೂಕು ಬೇಡ ಜಂಗಮ ಸಂಘದ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ನೀತಿ ಸಂಹಿತೆ ಜಾರಿಯಾದ ಕಾರಣ
ಸಮಾಜದ ಬಾಂಧವರು 8 ರಿಂದ 10 ಜನರು ಭಾಗವಹಿಸಲಿಕ್ಕೆ ಅವಕಾಶ ಇದ್ದು, ಸಮಾಜದ ಬಾಂಧವರು ಅನ್ಯಥಾ ಭಾವಿಸದೆ ಜಂಗಮರು ತಮ್ಮ ಮನೆಗಳಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜಾ ಕೈಕಾರ್ಯಗಳನ್ನು ನಡೆಸಬೇಕು ಎಂದು ಅವರು ಮನವಿ ಮಾಡಿದರು.
ರೇಣುಕಾಚಾರ್ಯರ ಜಯಂತಿ ದಿನದಂದು ತಾಲ್ಲೂಕಿನ ಎಲ್ಲಾ ಶಾಲಾ, ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಪೂಜೆಯೊಂದಿಗೆ ಆಚರಣೆ ಮಾಡಬೇಕೆಂದು ತಹಶೀಲ್ದಾರರಿಗೆ ಮನವಿ ಮಾಡಿದ ಪ್ರಯುಕ್ತ ತಹಶೀಲ್ದಾರ್ ಅವರು ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿ ಆಚರಿಸಲು ಸುತ್ತೋಲೆ ಹೊರಡಿಸಿದ್ದಾರೆ ಎಂದರು.
ಸಮಾಜದ ಹಿರಿಯ ಮುಖಂಡ ಎಚ್.ಎಂ. ಗಂಗಾಧರಯ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಕುಳಘಟ್ಟೆ ರುದ್ರಸ್ವಾಮಿ, ನಿರ್ದೇಶಕರಾದ ಬೆನಕನಹಳ್ಳಿ ಬಸವರಾಜಯ್ಯ, ಕ್ಯಾಸಿನಕೆರೆ ಜಗದೀಶಯ್ಯ, ಹೊಳೆಹರಳಹಳ್ಳಿ ಮಹಾಬಲಯ್ಯ, ಮಾಧ್ಯಮ ವಕ್ತಾರ ಎಂ.ಎಸ್. ಶಾಸ್ತ್ರೀ ಹೊಳೆಮಠ ಸುದ್ದಿ ಗೋಷ್ಠಿಯಲ್ಲಿದ್ದರು.