ಭಾರತೀಯ ಸಂಸ್ಕೃತಿಯ ಉಳಿವಿಗೆ, ದೇಶದ ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ

ಭಾರತೀಯ ಸಂಸ್ಕೃತಿಯ ಉಳಿವಿಗೆ, ದೇಶದ ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ

ಬಾಡ ಗ್ರಾಮದಲ್ಲಿನ ಬಿಜೆಪಿ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಕರೆ

ಮಾಯಕೊಂಡ, ಮಾ. 19- ದೇಶದ ಅಭಿವೃದ್ಧಿಗಾಗಿ, ಸಂಸ್ಕೃತಿಯ ಉಳಿವಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅಧಿಕಾರಕ್ಕೆ ತರಲು ಬಿಜೆಪಿಗೆ ಮತ ಚಲಾಯಿಸಿ ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಕರೆ ನೀಡಿದರು.

ಬಾಡ ಗ್ರಾಮದ ಮರುಳ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಮಾಯಕೊಂಡ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ವಿಶ್ವದಲ್ಲಿ ಕೋವಿಡ್ ಕಾಲದಲ್ಲಿ ಉಚಿತ ಚಿಕಿತ್ಸೆ ನೀಡಿದ ಮೊದಲಿಗ ಮೋದಿಯವರು. ಸರ್ಕಾರದ ಒಂದು ಪೈಸೆ ಅನುದಾನ ಹಾಕದೇ ರಾಮ ಮಂದಿರ ನಿರ್ಮಿಸಿದವರು ಮೋದಿ. ಉಜ್ಜ್ವಲ, ಜನಧನ್ ಯೋಜನೆ ತಂದು ಜನಪರ ಕೆಲಸ ಮಾಡಿದ್ದಾರೆ. ಕಾರ್ಯಕರ್ತರು ಮೋದಿ ಯೋಜನೆಗಳನ್ನು ಮನೆ ಮನೆ ಬಾಗಿಲಿಗೆ ತಲುಪಿಸಿ ಜನರ ಮನವೊಲಿಸಬೇಕು. ಔರಂಗಜೇಬ್, ಟಿಪ್ಪು ಮಾದರಿ ಆಡಳಿತ ‌ರಾಜ್ಯದಲ್ಲಿದ್ದು, ದೇಶದಲ್ಲಿ ಮೋದಿ ಆಡಳಿತ ಮತ್ತೊಮ್ಮೆ  ತರಲು ಎಲ್ಲರೂ ಹೋರಾಟ ಮಾಡಬೇಕು ಎಂದರು.

ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ದೇಶಕ್ಕಾಗಿ ಹೆಚ್ಚು ಕೆಲಸ ಮಾಡಿದವರು ಮೋದಿ. ಮುಂದಿನ ಪೀಳಿಗೆಗೆ ದೇಶ, ಸಂಸ್ಕೃತಿ ಉಳಿಸಬೇಕೆಂದರೆ ಮೋದಿಗೆ ಮತ ಹಾಕಬೇಕು.  ಮೋದಿಯವರು ರಷ್ಯಾ, ಉಕ್ರೇನ್‌ಗಳು  ಅಣುಬಾಂಬ್ ಹಾಕುವುದನ್ನು ತಡೆದ ವಿಶ್ವನಾಯಕರು. ರಾಮ ಮಂದಿರ ನಿರ್ಮಿಸಿ ದೇಶದ ಗೌರವ ಹೆಚ್ಚಿಸಿದ್ದಾರೆ.  ಮೋದಿ ಅವಶ್ಯಕತೆ ದೇಶಕ್ಕೆಯಿದೆ ಎಂದು ಹೇಳಿದರು.

ಹರಿಹರ ಶಾಸಕ ಬಿ.ಪಿ. ಹರೀಶ್, ಹರಿಹರಕ್ಕಿಂತ ಮಾಯಕೊಂಡದಲ್ಲಿ ಹೆಚ್ಚು ಮತ ಪಡೆಯುವ ಅವಕಾಶವಿದೆ. ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದಲ್ಲಿ ಕುಡಿಯಲು ನೀರಿಲ್ಲ.  ಮೀಸಲಿಟ್ಟ ಹಣ ಹಿಂಪಡೆದು ಎಸ್ಸಿ, ಎಸ್ಟಿಗಳಿಗೆ ಅನ್ಯಾಯ ಮಾಡಲಾಗಿದೆ. ಜಿಲ್ಲೆಗೆ ಒಂದೆರಡು ಗಂಗಾಕಲ್ಯಾಣ ಬೋರ್‌ವೆಲ್ ಕೊಡಲಾಗಿಲ್ಲ,  ಅಧಿಕಾರಕ್ಕಾಗಿ ಕಚ್ಚಾಟದಲ್ಲಿ  ರಾಜ್ಯ ಆರ್ಥಿಕ ದಿವಾಳಿಯಾಗಿದೆ. ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರಗಳ ಸಾಧನೆಗಳನ್ನು ಜನರಿಗೆ ತಿಳಿಸಿ ಎಂದರು.

ಬಿಜೆಪಿ ಘೋಷಿತ ಅಭ್ಯರ್ಥಿ  ಗಾಯತ್ರಿ ಸಿದ್ದೇಶ್ವರ, ಮಾಜಿ ಶಾಸಕ ಪ್ರೊ. ಲಿಂಗಣ್ಣ, ಜಿಲ್ಲಾ ಅಧ್ಯಕ್ಷ  ರಾಜಶೇಖರ್ ನಾಗಪ್ಪ, ಯುವ ಘಟಕದ ಉಪಾಧ್ಯಕ್ಷ  ಜಿ.ಎಸ್. ಶ್ಯಾಮ್, ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್  ನಾಯ್ಕ್, ಹನುಮಂತ ನಾಯ್ಕ, ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ತೋಳಹುಣಸೆ ಮಂಜಾನಾಯ್ಕ, ಮಾಯಕೊಂಡ ಕ್ಷೇತ್ರ ಘಟಕದ ಅಧ್ಯಕ್ಷ ಶಾಗಲೆ ದೇವೇಂದ್ರಪ್ಪ, ಬಿ. ಎಸ್. ರಮೇಶ್ ಸದಾನಂದ ಮಾತನಾಡಿದರು.

 ಬಯಲು ಸೀಮೆ  ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಜೀವನ ಮೂರ್ತಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ನೀರ್ಥಡಿ ನಟರಾಜ್, ಮುಖಂಡರಾದ  ಗಂಗನಕಟ್ಟೆ ಸಂಗಣ್ಣ, ಜಯಮ್ಮ, ಕರೆಲಕ್ಕೇನಹಳ್ಳಿ ಓಂಕಾರಪ್ಪ, ಹೆಬ್ಬಾಳ ಮಹೇಂದ್ರ ಕಾರಿಗನೂರು ಗಂಗಾಧರಪ್ಪ, ಹುಚ್ಚವನಹಳ್ಳಿ ಮಹೇಶ್, ಕಡ್ಲೆಬಾಳು ಧನಂಜಯ, ಅಣ್ಣೇಶ್, ಅಣಬೇರು ಶಿವಮೂರ್ತಿ, ನಂದಕುಮಾರ್ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!