ಮಲೇಬೆನ್ನೂರಿನಲ್ಲಿ ಫ್ಲೆಕ್ಸ್ ತೆರವು ಗೊಳಿಸಲು ಅಡ್ಡಿ : ರಸ್ತೆ ತಡೆ

ಮಲೇಬೆನ್ನೂರಿನಲ್ಲಿ ಫ್ಲೆಕ್ಸ್ ತೆರವು ಗೊಳಿಸಲು ಅಡ್ಡಿ : ರಸ್ತೆ ತಡೆ

ಮಲೇಬೆನ್ನೂರು, ಮಾ.17- ಪಟ್ಟಣದಲ್ಲಿ ಗ್ರಾಮದೇವತೆ ಹಬ್ಬಕ್ಕೆ ಸ್ವಾಗತ ಕೋರಿ ಹಾಕಿದ್ದ ಫೆಕ್ಸ್‌ಗಳನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ಯುವಕರ ಗುಂಪೊಂದು ರಸ್ತೆ ತಡೆ ನಡೆಸಿದ ಘಟನೆ ಭಾನುವಾರ ನಡೆಯಿತು.

ಹಬ್ಬ ಮುಗಿಯುವವರೆಗೆ ಫೆಕ್ಸ್‌ಗಳನ್ನು ತೆಗೆಯಬೇಡಿ ಎಂದು ಯುವಕರು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಇದಕ್ಕೆ ಅಧಿಕಾರಿಗಳು ಒಪ್ಪದಿದ್ದಾಗ ಕೆಲವು ಯುವಕರು ರಸ್ತೆ ತಡೆಗೆ ಮುಂದಾದರು.

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಪಿ.ಹರೀಶ್ ಅವರು, ರಾಜಕೀಯ ವ್ಯಕ್ತಿಗಳ ಫೋಟೋ ಇರುವ ಫ್ಲೆಕ್ಸ್‌ಗಳನ್ನು ತೆರವು ಮಾಡಿ, ಯುವಕರ ಫೋಟೋಗಳು ಮಾತ್ರ ಇರುವ ಫ್ಲೆಕ್ಸ್‌ಗಳನ್ನು ಗುರುವಾರದವರೆಗೆ ಉಳಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಅವರಿಗೆ ಹೇಳಿದರು.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಾವು ಎಲ್ಲಾ ಫ್ಲೆಕ್ಸ್‌ಗಳನ್ನು ತೆರವು ಮಾಡುತ್ತಿದ್ದೇವೆ. ಸಹಾಯಕ ಚುನಾವಣಾಧಿಕಾರಿಗಳಿಂದ ಫ್ಲೆಕ್ಸ್‌ ಹಾಕಲು ಅನುಮತಿ ಪತ್ರ ತಂದರೆ ಅವಕಾಶ ಮಾಡಿಕೊಡುತ್ತೇವೆ ಎಂದು ಸುರೇಶ್ ಅವರು, ಹೇಳಿದಾಗ ಆಗ ಹರೀಶ್ ಅವರು, ಚುನಾವಣಾಧಿಕಾರಿಗಳ ಜೊತೆಗೂ ಈ ಬಗ್ಗೆ ಚರ್ಚಿಸಿದಾಗ ಅವರೂ ಕೂಡಾ ಅನುಮತಿ ಕಡ್ಡಾಯ ಎಂಬ ಉತ್ತರ ನೀಡಿದ್ದರಿಂದ ಯುವಕರು ಸುಮ್ಮನಾಗಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು.

ಡಾಂಬರೀಕರಣಕ್ಕೆ ಆಗ್ರಹ : ಮಲೇಬೆನ್ನೂರಿನ ಹೆದ್ದಾರಿಯಿಂದ ನಂದಿಗುಡಿ ರಸ್ತೆಗೆ ಡಾಂಬರೀಕರಣ ಮಾಡುವಂತೆ ರಸ್ತೆ ಅಕ್ಕ-ಪಕ್ಕದ ವ್ಯಾಪಾರಿಗಳು ರಸ್ತೆಯಲ್ಲಿ ನಿಂತು ಪ್ರತಿಭಟನೆ ನಡೆಸಿದ ಘಟನೆಯೂ ಭಾನುವಾರ ನಡೆಯಿತು.

ರಸ್ತೆ ಅಕ್ಕ-ಪಕ್ಕ ಚರಂಡಿ ಕಾಮಗಾರಿ ಮುಗಿದಿದೆ. ರಸ್ತೆ ಡಾಂಬರೀಕರಣ ಮಾತ್ರ ಬಾಕಿ ಉಳಿದಿದ್ದು, ಇದರಿಂದಾಗಿ ರಸ್ತೆ ಧೂಳು ಹೆಚ್ಚಾಗಿ ನಮ್ಮ ಆರೋಗ್ಯ ಹದಗೆಟ್ಟಿದೆ ಎಂದು ವ್ಯಾಪಾರಿಗಳು ದೂರಿದರು.

ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರು, ಇದು ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ ರಸ್ತೆ ಆಗಿರುವುದರಿಂದ ಆ ಇಲಾಖೆಯ ಅಧಿಕಾರಿಗಳು ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಡಾಂಬರೀಕರಣ ಮಾಡುತ್ತೇವೆಂದು ಹೇಳಿದ್ದಾರೆಂಬ ಉತ್ತರ ನೀಡಿದ ಮೇಲೆ ವ್ಯಾಪಾರಿಗಳು ಸಮಾಧಾನಗೊಂಡರು.

error: Content is protected !!