ದಾವಣಗೆರೆ, ಮಾ. 17- ಗುರು ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿಯ ಸಂಸ್ಮರಣೆಗಾಗಿ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ 31 ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಭಾನುವಾರ ಸಂಭ್ರಮದ ತೆರೆ ಕಂಡಿತು.
ಮಂತ್ರಾಲಯ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣ ಸಮಿತಿ, ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಸಮಿತಿ ವತಿಯಿಂದ ಮಾ. 11 ರಿಂದ 17 ರವರೆಗೆ ಹಮ್ಮಿಕೊಂಡಿದ್ದ ಧಾರ್ಮಿಕ, ಸಾಂಸ್ಕೃತಿಕ ಹಬ್ಬಕ್ಕೆ ದೇವನಗರಿಯ ಭಕ್ತರು ಸಾಕ್ಷಿಯಾದರು. 7 ದಿನಗಳ ಕಾಲ
ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ, ಸುಪ್ರಭಾತ, ಹೋಮ, ಲಕ್ಷ ಪುಷ್ಪಾರ್ಚನೆ ಜತೆಗೆ ಪ್ರವಚನಗಳು ನಡೆದವು.
ವಿವಿಧ ಮಠಾಧೀಶರ ಸಾನ್ನಿಧ್ಯ ಮಹೋತ್ಸವದ ಕಳೆಯನ್ನು ಹೆಚ್ಚಿಸಿತು. ಪಂಡಿತರಿಂದ ಜ್ಞಾನ ಕಾರ್ಯ ನಡೆದರೆ, ವಿವಿಧ ಕಲಾವಿದರು ಸಂಗೀತ, ನೃತ್ಯ ಇನ್ನಿತರೆ ಕಲಾ ಪ್ರಕಾರಗಳ ಮೂಲಕ ಪಾಲ್ಗೊಂಡವ ರೆಲ್ಲರಿಗೂ ಗುರುರಾಯರ ಸ್ಮರಣೆ ಮಾಡಿಸಿದರು.
ಪಲಿಮಾರು ಮಠದ ಶ್ರೀಗಳು ಏಳು ದಿನಗಳ ಕಾಲ ಉಪಸ್ಥಿತರಿದ್ದು, ನಿತ್ಯವೂ ಅನುಗ್ರಹ ಸಂದೇಶವನ್ನು ನೀಡಿದರು. ಪೇಜಾವರ, ಅದಮಾರು, ಶ್ರೀ ಮಠದ ಸ್ವಾಮೀಜಿಗಳು ಆಗಮಿಸಿ ರಾಯರ ಮಹಿಮೆಯನ್ನು ಕೊಂಡಾಡಿದರು.
ಭರತನಾಟ್ಯ, ಕೊಳಲು, ವೀಣಾ ವಾದನ, ದಾಸವಾಣಿ ಜತೆಗೆ ವಿವಿಧ ಭಜನಾ ಮಂಡಳಿಯವರು ಉತ್ಸಾಹದಿಂದ ಪಾಲ್ಗೊಂಡು ಮಹೋತ್ಸವ ರಂಗೇರುವಂತೆ ಮಾಡಿದರು.
ರಸಪ್ರಶ್ನೆ ಸ್ಪರ್ಧೆ, ದಿಪೋತ್ಸವ, ಸಾಮೂಹಿಕ ಲಕ್ಷ್ಮೀ ಶೋಭಾನ ಪರಾಯಣ ಇನ್ನಿತರೆ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಉತ್ಸವ ಎರಡನೇ ದಿನ ಭವ್ಯ ಶೋಭಾಯಾತ್ರೆ ಜರುಗಿತು.