ಕೆರೆ ಒತ್ತುವರಿ ಸ್ವಯಂ ಪ್ರೇರಿತ ತೆರವು: ಶಾಸಕ ಬಿ. ದೇವೇಂದ್ರಪ್ಪ ಶ್ಲ್ಯಾಘನೆ

ಕೆರೆ ಒತ್ತುವರಿ ಸ್ವಯಂ ಪ್ರೇರಿತ ತೆರವು: ಶಾಸಕ ಬಿ. ದೇವೇಂದ್ರಪ್ಪ ಶ್ಲ್ಯಾಘನೆ

ಜಗಳೂರು, ಮಾ. 12 – ಸ್ವಗ್ರಾಮದಲ್ಲಿ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ರೈತರು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡುವ ಮೂಲಕ ಸಹಕರಿಸಿದ್ದಾರೆ. ಇದರ ಫಲವಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದವರು ಗೋಕಟ್ಟೆಯನ್ನು ಸುಂದರ ವಿನ್ಯಾಸದ ಕೆರೆ ನಿರ್ಮಾಣ ಮಾಡಿರುವುದು ಶ್ಲ್ಯಾಘನೀಯ ಕಾರ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆವತಿಯಿಂದ ‘ನಮ್ಮ ಊರು ನಮ್ಮ ಕೆರೆ’ ಯೋಜನೆಯಡಿ ಅಭಿವೃದ್ದಿಗೊಳಿಸಿದ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

3.5 ಕೋಟಿ ವೆಚ್ಚದಲ್ಲಿ ಕೆರೆ ತಡೆಗೋಡೆ ಅಭಿವೃದ್ದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮೊದಲ ಕಂತಿನಲ್ಲಿ 1.5 ಕೋಟಿ ಬಿಡುಗಡೆಯಾಗಿದೆ.ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು  ಹೇಳಿದರು.

ಚಿಕ್ಕಮ್ಮಹಟ್ಟಿ ಕೆರೆಗೂ ನೀರು ಭರ್ತಿ :

ಗಡಿಮಾಕುಂಟೆ ಕೆರೆಗೆ 57 ಕೆರೆ ತುಂಬಿಸುವ ಯೋಜನೆಯಡಿ ಪೈಪ್ ಲೈನ್ ಪಕ್ಕದಲ್ಲಿ ಹಾದು ಹೋಗಿದ್ದು. ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಮನವೊಲಿಸಿ ಪೈಪ್ ಮೂಲಕ ಚಿಕ್ಕಮ್ಮನಹಟ್ಟಿ ಕೆರೆಗೆ ನೀರು ಹರಿಸಲಾಗುವುದು   ಎಂದು  ಭರವಸೆ ನೀಡಿದರು.

ಗ್ರಾಮದ ಪವಾಡ ಪುರುಷ ಪೂಜಾ ರಜ್ಜನ ನಾಮದಡಿ ದ್ವಾರ ಬಾಗಿಲು ನಿರ್ಮಿಸಲಾಗುವುದು. ಶಾಲೆ, ಪಶು ಆಸ್ಪತ್ರೆ ಕಟ್ಟಡ ಸೇರಿದಂತೆ, ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗುವುದು.

ಮಳೆಗಾಲದಲ್ಲಿ ಗ್ರಾಮದ ಹೊರ ಹೊಲಯದ ಕಲ್ಲಂಜಿಕಟ್ಟೆಯಿಂದ ಹರಿದು ಪೋಲಾಗುತ್ತಿದ್ದ ನೀರನ್ನು ಸಂಗ್ರಹಿಸಿ ಜಗಳೂರು ಕೆರೆಗೆ ಸರಾಗವಾಗಿ ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಜಿಲ್ಲಾ ನಿರ್ದೇಶಕ ಡಾ. ಜನಾರ್ಧನ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಡಿ , ನಮ್ಮೂರು ನಮ್ಮ ಕೆರೆ ಯೋಜನೆಯಡಿ 5 ಕೆರೆಗಳನ್ನು ಅಭಿವೃದ್ದಿಗೆ ಆಯ್ಕೆಮಾಡಲಾಗಿದೆ. ಅದರಲ್ಲಿ ಚಿಕ್ಕಮ್ಮನಹಟ್ಟಿ ಕೆರೆಯನ್ನು 12.30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ‌ ಅಧ್ಯಕ್ಷೆ ಲಕ್ಷ್ಮಮ್ಮ ಮಾರಪ್ಪ, ಉಪಾಧ್ಯಕ್ಷೆ ಸುಧಾಮಣಿ ಕಾಟಪ್ಪ, ಸದಸ್ಯರಾದ ಕೆಂಗಮ್ಮ, ಓ. ಮಂಜಣ್ಣ, ಬೊಮ್ಮಕ್ಕ, ಪ್ರಾದೇಶಿಕ ನಿರ್ದೇಶಕಿ ಗೀತಮ್ಮ, ಜ್ಞಾನವಿಕಾಸ ಯೋಜನೆ ನಿರ್ದೇಶಕಿ ರತ್ನ ಪಿ.ಎಸ್‌. ಅರವಿಂದನ್, ನಾಗರಾಜ್, ಕೆರೆ ಅಭಿವೃದ್ದಿ ಸಮಿತಿಯ, ರಂಗಪ್ಪ, ಕಾಟಪ್ಪ, ತಿಪ್ಪೇಸ್ವಾಮಿ, ಹನುಮಂತಪ್ಪ, ಮುಂತಾದ ವರು ಭಾಗವಹಿಸಿದ್ದರು.

error: Content is protected !!