ಶ್ಯಾಬನೂರಿನಲ್ಲಿ 19 ರಂದು ಆಂಜನೇಯ ಸ್ವಾಮಿ ರಥೋತ್ಸವ

ಶ್ಯಾಬನೂರಿನಲ್ಲಿ 19 ರಂದು  ಆಂಜನೇಯ ಸ್ವಾಮಿ ರಥೋತ್ಸವ

ಇಂದು ರಥದ ಗಾಲಿಗಳನ್ನು ತೇರಿನ ಮನೆಯಿಂದ 

ಹೊರಗೆ ಎಳೆಯುವ ಕಾರ್ಯಕ್ರಮ

ದಾವಣಗೆರೆ – ಶ್ಯಾಬನೂರಿನ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಕಾರ್ಯಕ್ರಮಗಳು ಇಂದಿನಿಂದ ಇದೇ ದಿನಾಂಕ 21ರ ಗುರುವಾರದವರೆಗೆ ಏರ್ಪಾ ಡಾಗಿವೆ. ಇದೇ ದಿನಾಂಕ 19ರ ಮಂಗಳವಾರ ರಾತ್ರಿ 12 ಗಂಟೆಗೆ ಶ್ರೀ ಸ್ವಾಮಿಯ ರಥೋತ್ಸವ ಜರುಗಲಿದೆ.

ರಥೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ 5 ಗಂಟೆಯಿಂದ ಅಮೃತ ಯೋಗದಲ್ಲಿ ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ಈಶ್ವರ ದೇವರುಗಳ ಪೂಜಾದಿಗಳ ನಂತರ ಬೆಳಿಗ್ಗೆ 8ರಿಂದ 9 ಗಂಟೆಯೊಳಗೆ ಶ್ರೀ ಆಂಜನೇಯ ಸ್ವಾಮಿ ರಥದ ಗಾಲಿಗಳನ್ನು ತೇರಿನ ಮನೆಯಿಂದ ಹೊರಗೆ ಎಳೆಯುವ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 13ರ ಬುಧವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸ್ವಾಮಿಗೆ ವಿಶೇಷ ಅಲಂಕಾರ, ಪೂಜಾದಿಗಳು ಮತ್ತು ನಿತ್ಯ ಸೇವಾದಿಗಳು ಜರುಗಲಿವೆ.

ದಿನಾಂಕ 17ರ ಭಾನುವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸ್ವಾಮಿಗೆ ಅಭಿಷೇಕ, ಅಲ ಅಲಂಕಾರ ಪೂಜಾದಿಗಳು, ನಿತ್ಯ ಸೇವಾದಿಗಳು ಏರ್ಪಾಡಾಗಿವೆ.  ಸಂಜೆ 6 ಗಂಟೆಗೆ ಶ್ರೀ ಆಂಜನೇಯ ಸ್ವಾಮಿಯ ಕಂಕಣಧಾರಣೆ, ಪೂಜಾ ಧ್ವಜಾರೋಹಣ, ಮಹಾಮಂಗಳಾರತಿ ನಡೆಯಲಿದೆ.

ದಿನಾಂಕ 18ರ ಸೋಮವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸ್ವಾಮಿಗೆ ಅಭಿಷೇಕ, ಅಲಂಕಾರದ ನಿತ್ಯ ಪೂಜಾದಿಗಳ ಬಳಿಕ ಬೆಳಿಗ್ಗೆ ಗಣಪತಿ ಪೂಜೆ, ವಿಗ್ರಹ, ನಾಂದಿ, ಸಂಕಲ್ಪ, ಕಲಶಸ್ಥಾಪನೆ, ನವಗ್ರಹ, ಅಂಕುರಾರ್ಪಣೆ ಪ್ರಧಾನ ದೇವತಾ ಸ್ಥಾಪನೆ, ಮೃತ್ಯುಂಜಯ ಇತ್ಯಾದಿ ಜಪಾದಿಗಳು ಹಾಗೂ ನಿತ್ಯ  ಸೇವಾಧಿಗಳು ನಡೆಯಲಿವೆ.

ದಿನಾಂಕ 19ರ ಮಂಗಳವಾರ ಬೆಳಿಗ್ಗೆ 4ಕ್ಕೆ ಶ್ರೀ ಆಂಜನೇಯ ಸ್ವಾಮಿ, ಶ್ರೀ ಈಶ್ವರ ಸ್ವಾಮಿ, ಶ್ರೀ ರಾಮ ದೇವರುಗಳ ಪೂಜಾದಿಗಳ ನಂತರ ಅಭಿಷೇಕ, ಅಲಂಕಾರ ಹಾಗೂ ಅವಿವಾಹಿತ ಪೂಜಾ ಜಪಾದಿಗಳು ನಡೆಯಲಿವೆ. ಶ್ಯಾನಭೋಗರು, ಕನ್ವೀನರ್, ಗೌಡ್ರು, ಪಟೇಲರು, ಛೇರ್ಮನ್ನರು ಹಾಗೂ ಗ್ರಾಮಸ್ಥರಿಂದ ಗಣಪತಿ, ನವಗ್ರಹ, ಪೂಜಾ ಇತ್ಯಾದಿ ನಂತರ ಬೆಳಿಗ್ಗೆ 8.30ಕ್ಕೆ ರಥದ ಕಲಶ ಸ್ಥಾಪನೆ ಜರುಗಲಿದೆ. ಹೋಮ, ಹವನಾದಿಗಳು ಹಾಗೂ ಬಲಿ ಪೂರ್ಣಾಹುತಿ  ನಂತರ ರಾತ್ರಿ 7 ಗಂಟೆಯಿಂದ ನಾಗನೂರಿನಿಂದ
ಶ್ರೀ ಸ್ವಾಮಿಗಳ ಆಗಮನ, ನಂತರ ಗ್ರಾಮ ಪ್ರದಕ್ಷಿಣೆ ನಂತರ ರಥ ಪೂಜೆ ನಡೆಯಲಿದೆ. ಮಧ್ಯರಾತ್ರಿ 12ರಿಂದ ಸಲ್ಲುವ ಅಮೃತ ಶುಭ ಯೋಗದ ಘಳಿಗೆಯಲ್ಲಿ ರಥಾರೋಹಣ ಜರುಗಲಿದೆ. ನಂತರ ಕಂಕಣ ವಿಸರ್ಜನೆ, ಧ್ವಜ ವಿಸರ್ಜನೆ ನಡೆಯಲಿದೆ.

ದಿನಾಂಕ 20ರ ಬುಧವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸ್ವಾಮಿಗೆ ಅಭಿಷೇಕ, ಅಲಂಕಾರ, ನಿತ್ಯ ಸೇವಾದಿಗಳ ನಂತರ ಮಧ್ಯಾಹ್ನ 2 ಗಂಟೆಗೆ ಬೆಲ್ಲದ ಬಂಡಿ ಉತ್ಸವ ಜರುಗಲಿದೆ. ಸಂಜೆ ಶ್ಯಾಬನೂರು, ನಾಗನೂರು, ಶಿರಮಗೊಂಡನಹಳ್ಳಿ, ನಿಟುವಳ್ಳಿ ಗ್ರಾಮಗಳಿಗೆ ಶ್ರೀ ಸ್ವಾಮಿಗಳ ಸಂಚಾರ ನಡೆಯಲಿದೆ.

ದಿನಾಂಕ 21ರ ಗುರುವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸ್ವಾಮಿಗೆ ವಿಶೇಷ ಪೂಜೆ ನಂತರ ಸಂಚಾರಗಳಿಂದ ಆಗಮಿಸುವ ದೇವರುಗಳನ್ನು ವಿಜೃಂಭಣೆಯಿಂದ ಬರ ಮಾಡಿಕೊಂಡು, ಶ್ಯಾಬನೂರು, ನಾಗನೂರು, ಶಿರಮಗೊಂಡನಹಳ್ಳಿ ಮತ್ತು ನಿಟುವಳ್ಳಿ ಗ್ರಾಮಸ್ಥರಿಂದ ಅಭಿಷೇಕ, ಅಲಂಕಾರ, ನಾಂದಿ ಹಾಗೂ ಓಕಳಿ ಕಾರ್ಯಕ್ರಮ, ಅನ್ನ ಸಂತರ್ಪಣೆ ಹಾಗೂ ಅವಭೃತ ಸ್ನಾನಗಳೊಂದಿಗೆ ಉತ್ಸವಾದಿಗಳು ಪೂರ್ಣಗೊಳ್ಳಲಿದೆ.

ಹರಿಹರ ಶ್ರೀ ಚಿದಂಬರ ಜೋಯಿಷ್ ಮತ್ತಿತರೆ ಪುರೋಹಿತರಿಂದ  ಪೂಜಾವಿಧಿ ನಿರ್ವಹಣೆ ನಡೆಯಲಿದೆ. ದಿನಾಂಕ 21ರ ಗುರುವಾರ ರಾತ್ರಿ
9 ಗಂಟೆಗೆ ಶ್ರೀ ಮಾರುತಿ ನಾಟ್ಯ ಕಲಾ ಸಂಘದಿಂದ `ರೈತ ನಕ್ಕರೆ ಜಗವೆಲ್ಲ ಸಕ್ಕರೆ’ ಅರ್ಥಾತ್ `ಸಿಡಿದೆದ್ದ ಸಹೋದರರು’ ನಾಟಕ ಪ್ರದರ್ಶನಗೊಳ್ಳಲಿದೆ.

error: Content is protected !!