ಮಕ್ಕಳ ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬ ಸೂಕ್ತ ವೇದಿಕೆ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬ ಸೂಕ್ತ ವೇದಿಕೆ

ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಅಭಿಮತ

ದಾವಣಗೆರೆ, ಮಾ. 10- ಮಕ್ಕಳ ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬ ಸೂಕ್ತ ವೇದಿಕೆಯಾಗಿದೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ತಿಳಿಸಿದರು. 

ಕರ್ನಾಟಕ ಬಾಲ ವಿಕಾಸ ಅಕಾಡೆಮಿ (ಧಾರವಾಡ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ  ಇಲಾಖೆ  ಇವರ ಸಹಯೋಗದಲ್ಲಿ ಜಿಲ್ಲಾ ಬಾಲಭವನದಲ್ಲಿ ಮೊನ್ನೆ ಏರ್ಪಡಿಸಿದ್ದ ಮಕ್ಕಳ ಹಬ್ಬ-2024 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳನ್ನು ಅಂಕಗಳ ಆಧಾರದ ಮೇಲೆ ಅಳೆಯದೇ ಅವರಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಸೂಕ್ತ ವೇದಿಕೆ ಒದಗಿಸಿಕೊಟ್ಟು ಅವರ ಕನಸುಗಳಿಗೆ ಬಣ್ಣ ತುಂಬಿದಾಗ ಅವರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಪಾಠ, ಪ್ರವಚನದ ಜೊತೆಗೆ ಅವರಲ್ಲಿ ಸಾಹಿತ್ಯ, ಸಾಂಸ್ಕೃತ, ಕ್ರೀಡೆ, ಪರಿಸರ ಪ್ರಜ್ಞೆಯ
ಬಗ್ಗೆ ಅಭಿರುಚಿ  ಬೆಳೆಸಬೇಕು. ಹಿಂದೆ ಮನೆಗಳಲ್ಲಿ ನಮ್ಮ ಹಿರಿಯರು ಮಕ್ಕಳನೇ ಕೂಡಿಸಿಕೊಂಡು ಭಕ್ತಿ ಗೀತೆ, ಜಾನಪದ, ಸೋಬಾನೆ, ಕಿರು ಕಥೆಗಳನ್ನು ರಸವತ್ತಾಗಿ ಹೇಳುವ ಮೂಲಕ ಅವರ ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದರು. ಇಂದು ಎಲ್ಲರ ಮನೆಯಲ್ಲೂ ಒತ್ತಡದ ಬದುಕು, ಬಿಡುವಿಲ್ಲದಂತೆ ಸಮಯ ಸವೆಸುತ್ತಿದ್ದೇವೆ. ಇದರ ಪರಿಣಾಮ ನಮ್ಮ ಮಕ್ಕಳಿಗೆ ಟಿ.ವಿ ಮತ್ತು ಮೊಬೈಲ್ ಆಪ್ತವಾಗಲು ಕಾರಣವಾಗಿದೆ. ಅಂತಹ ವಾತಾವರಣದಿಂದ ಮಕ್ಕಳನ್ನು ಹೊರ ತರಲು ಮಕ್ಕಳ ಹಬ್ಬದಂತಹ ಕಾರ್ಯಕ್ರಮ ಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ
ವಾಸಂತಿ ಉಪ್ಪಾರ ಮಾತನಾಡಿ, ಪ್ರತಿ ಮಗುವಿನಲ್ಲಿಯೂ ಏನಾದರೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೊರತರುವ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ದಾವಣಗೆರೆಯ
ಬಾಲಭವನ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಈ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಾನಪದ ನೃತ್ಯ, ಕವ್ವಾಲಿ, ಕೋಲಾಟ, ದೇಶಭಕ್ತಿಗಳ ಗಾಯನ, ಚಿತ್ರಕಲೆ, ಕ್ಲೇ ಮಾಡಲಿಂಗ್‍ನಲ್ಲಿ ಮಕ್ಕಳು ಸಂತಸದ ಚಿಲಿಮೆಯಾಗಿ ಹೊರಹೊಮ್ಮಿದ್ದಾರೆ. 

ಬಟ್ಲಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ಮಗು ಕ್ಲೇ ಮಾಡಲಿಂಗ್‍ನಲ್ಲಿ ನಿರ್ಮಿಸಿದ ಸಾಲು ಮರದ ತಿಮ್ಮಕ್ಕನ ಪ್ರತಿಭೆ ಎಲ್ಲರ ಗಮನ ಸೆಳೆಯುತ್ತಿದೆ. ಇಂತಹ ಮಕ್ಕಳಿಗೆ ಪ್ರೋತ್ಸಾಹ, ಬೆಂಬಲ ನೀಡಿದರೆ ಮುಂದೆ ಬಹುದೊಡ್ಡ ಕಲಾವಿದರಾಗುವ ಅವಕಾಶಗಳು ದೊರಕುತ್ತದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಕಾರ್ಯದರ್ಶಿ, ಎಂ. ಗುರುಸಿದ್ಧಸ್ವಾಮಿ, ಶಿಕ್ಷಣ ಸಂಯೋಜಕರಾದ ಶಿವಲೀಲಾ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥತರಿದ್ದರು. 

ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ರಾಜಕುಮಾರ್ ರಾಥೋಡ್ ವಹಿಸಿದ್ದರು. ಶಿಕ್ಷಕಿ ಎ.ಆರ್. ಇಂದಿರಾ ಸಿದ್ದೇಶ್ ಪ್ರಾರ್ಥಿಸಿದರು. ಎಂ. ಗುರುಸಿದ್ಧಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಸಿದ್ದೇಶ್ ಕತ್ತಲಗೆರೆ ವಂದಿಸಿದರು.

error: Content is protected !!