ರಾಣೇಬೆನ್ನೂರಿನಲ್ಲಿ ಇಂದು ಟೋಲ್ ಮುತ್ತಿಗೆಗೆ ನಿರ್ಧಾರ

ರಾಣೇಬೆನ್ನೂರಿನಲ್ಲಿ ಇಂದು ಟೋಲ್ ಮುತ್ತಿಗೆಗೆ ನಿರ್ಧಾರ

ರಾಣೇಬೆನ್ನೂರು, ಮಾ. 10 –   ಚಳಗೇರಿ ಟೋಲ್ ಪ್ಲಾಜಾ ಪ್ರಾರಂಭವಾಗಿ ಇಲ್ಲಿಗೆ 12-13 ವರ್ಷ ಗತಿಸಿದರೂ ಕೂಡ ರೈತರಿಗೆ  ಹಾಗೂ ಇಲ್ಲಿಯ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡದೇ ಇರುವುದನ್ನು ಖಂಡಿಸಿ, ನಾಳೆ ದಿನಾಂಕ   11ರ ಬೆಳಗ್ಗೆ 10 ಘಂಟೆಗೆ ಟೋಲ್ ಸ್ಥಗಿತಗೊಳಿಸಿ ಮುತ್ತಿಗೆ ಹಾಕಲಾಗುವುದೆಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ತಿಳಿಸಿದರು

ಚಳಗೇರಿ ಟೋಲ್ ಪ್ಲಾಜಾ ಹತ್ತಿರ ಚಳಗೇರಿ ಟೋಲ್ ಪ್ಲಾಜಾ ಅಸೋಸಿಯೇಷನ್‌ನವರು ತಮ್ಮ ಹಲವು ದಿನಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮೊನ್ನೆ ಹಮ್ಮಿಕೊಂಡಿದ್ದ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಹೊಸದಾಗಿ ಟೆಂಡರ್ ಪಡೆದ ರಿದ್ದಿ-ಸಿದ್ದಿ ಅಸೋಸಿಯೇಷನ್‌ನವರು ಇಲ್ಲಿ ಕೆಲಸಕ್ಕೆ ಸೇರಿರುವ ನಮ್ಮೆಲ್ಲಾ ರೈತರ ಮಕ್ಕಳ ಭವಿಷ್ಯದ ಜೊತೆ ವಿನಾಕಾರಣ ಅವರಿಗೆ ಸಂಬಂಧಪಡದೇ ಇರುವ ಹಲವು ಮಾಹಿತಿಗಳನ್ನು ಕೇಳುತ್ತಿದ್ದು ಮಾನಸಿಕ ನೋವು ಕೊಡುತ್ತಿದ್ದಾರೆ. ಮಹಿಳಾ ಕೆಲಸಗಾರರಿಗೆ ಯಾವುದೇ ಭದ್ರತೆ ಇಲ್ಲ, ಕನಿಷ್ಠ ವೇತನ ನಿಗದಿಗೊಳಸಬೇಕು.

ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯ ಆದೇಶದ ಪ್ರಕಾರ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ಈ ತಕ್ಷಣವೇ ಒದಗಿಸಬೇಕೆಂದು ಇಲ್ಲಿಯ ಕೆಲಸಗಾರರ ಬೇಡಿಕೆಗಳು ನ್ಯಾಯ ಸಮ್ಮತ, ಕಾನೂನು ಸಮ್ಮತವಾಗಿದ್ದು ಕೂಡಲೇ ಬೇಡಿಕೆ ಈಡೇರಿಸಬೇಕು, ಇಲ್ಲದಿದ್ದರೆ ಬರುವ ಸೋಮವಾರ ರೈತರು ‘ಟೋಲ್’ಗೆ ಮುತ್ತಿಗೆ ಹಾಕಿದರೆ ಇಲ್ಲಿಯ ಕೆಲಸಗಾರರು ಕೆಲಸ ಸ್ಥಗಿತಗೊಳಿಸುತ್ತಾರೆ, ಮುಂದೆ ಆಗುವ ಎಲ್ಲ ಅಡೆ ತಡೆಗಳಿಗೆ ಗುತ್ತಿಗೆ ಪಡೆದ ಕಂಪನಿ ಮತ್ತು ಜಿಲ್ಲಾಡಳಿತವೇ ಹೊಣೆ ಎಂದು ವ್ಯವಸ್ಥಾಪಕರಾದ ವಿಕಾಸ್ ಶರ್ಮಾ ಅವರಿಗೆ ಕೆಲಸಗಾರರ ಪರವಾಗಿ  ಪಾಟೀಲರು ಮನವಿ ಸಲ್ಲಿಸಿದರು.

ವೇದಿಕೆಯ ಮೇಲೆ ಮುಖಂಡರಾದ ರಾಮಣ್ಣ ಉಕ್ಕಡಗಾತ್ರಿ, ವಾಗೀಶ ಸಾಲಿಮಠ, ದಿಳ್ಳೆಪ್ಪ ಸತ್ಯೆಪ್ಪನವರ, ಚಂದ್ರಣ್ಣ ಬೇಡರ, ನಾಗರಾಜ ಅರಕಾಚಾರಿ, ಹರಿಗೌಡ ಪಾಟೀಲ, ಯಲ್ಲಪ್ಪ ಓಲೇಕಾರ, ಕರಬಸಯ್ಯ ಚಂಕ್ರನಹಳ್ಳಿಮಠ, ಹನುಮಂತಪ್ಪ, ಭೀಮರಡ್ಡಿ ಹೊಸಳ್ಳಿ, ಮರಡೆಪ್ಪ ಚಳಗೇರಿ ಮುಂತಾದ  ಮುಖಂಡರು ಭಾಗವಹಿಸಿದ್ದರು. ಚಳಗೇರಿ ಟೋಲ್‍ಪ್ಲಾಜಾ ಅಸೋಸಿಯೇಷನ್ ಅಧ್ಯಕ್ಷ ಹನುಮಂತಪ್ಪ ಯಲ್ಲಕ್ಕನವರ, ಉಪಾಧ್ಯಕ್ಷ  ಮಹೇಶ ನೀಲಪ್ಪನವರ, ಕಾರ್ಯದರ್ಶಿ ಕುಮಾರ ಮುದಿಗೌಡ್ರ ಇತರರು ಹಾಜರಿದ್ದರು. 

error: Content is protected !!