ಗಮನ ಸೆಳೆದ 108 ಶಿವಲಿಂಗಗಳ ಬೃಹತ್ ಶೋಭಾಯಾತ್ರೆ : ಹೆಲಿಕ್ಯಾಪ್ಟರ್‌ನಿಂದ ಪುಷ್ಪವೃಷ್ಟಿ

ಗಮನ ಸೆಳೆದ 108 ಶಿವಲಿಂಗಗಳ ಬೃಹತ್ ಶೋಭಾಯಾತ್ರೆ : ಹೆಲಿಕ್ಯಾಪ್ಟರ್‌ನಿಂದ ಪುಷ್ಪವೃಷ್ಟಿ

ಮಲೇಬೆನ್ನೂರು, ಮಾ.8- ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಮ್ಮಿಕೊಂಡಿದ್ದ 108 ಶಿವಲಿಂಗಗಳ ಬೃಹತ್ ಶೋಭಾಯಾತ್ರೆ ಗಮನ ಸೆಳೆಯಿತು.

ಬೆಳಿಗ್ಗೆ ಪಟ್ಟಣದ ನೀರಾವತಿ ಇಲಾಖೆಯ ಆವರಣದಿಂದ ಆರಂಭವಾದ ಶೋಭಾಯಾತ್ರೆಗೆ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜೀ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮಂಜುಳಾಜೀ, ಭಗವಂತನ ಅವತರಣಿಕೆಯಾಗಿ 88 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ನಾಡಿನಲ್ಲಿ ಮಳೆ-ಬೆಳೆ ಸಮೃದ್ಧಿಯಾಗಲಿ ಹಾಗೂ  ಶಿವ ಪರಮಾತ್ಮನ ಆಶೀರ್ವಾದ ಸರ್ವರಿಗೂ ಲಭಿಸಲಿ ಎಂಬ ಪ್ರಾರ್ಥನೆಯೊಂದಿಗೆ 108 ಶಿವಲಿಂಗಗಳ ಮೆರವಣಿಗೆ ಏರ್ಪಡಿಸಿದ್ದೇವೆ ಎಂದು ತಿಳಿಸಿದರು.

ನಂತರ ಶೋಭಾಯಾತ್ರೆಯು ಕೊಮಾರನಹಳ್ಳಿ, ಹಾಲಿವಾಣ, ಹರಳಹಳ್ಳಿ, ಮಲ್ಲನಾಯಕನಹಳ್ಳಿ,
ನೆಹರು ಕ್ಯಾಂಪ್, ಬೂದಿಹಾಳ್, ಕುಣೆಬೆಳಕೆರೆ, ನಿಟ್ಟೂರು, ಕುಂಬಳೂರು ಗ್ರಾಮಗಳಲ್ಲಿ ಸಂಚರಿಸಿ, ಮಲೇಬೆನ್ನೂರು ಬಳಿ ಬಂದಾಗ ಹೆಲಿಕ್ಯಾಪ್ಟರ್
ಮೂಲಕ ಶಿವಲಿಂಗಗಳಿಗೆ ಮತ್ತು ವೀರಭದ್ರೇಶ್ವರ ದೇವಸ್ಥಾನಕ್ಕೆ ಪುಷ್ಪವೃಷ್ಟಿ ಮಾಡಲಾಯಿತು.

ಅಲ್ಲದೇ, ಮಲೇಬೆನ್ನೂರು ಪಟ್ಟಣದಲ್ಲಿ 2 ಸುತ್ತು ಹಾಕಿದ ಹೆಲಿಕ್ಯಾಪ್ಟರ್ ಹೂ ಮಳೆ ಸುರಿಸಿತು. ಹೆಲಿಕ್ಯಾ ಪ್ಟರ್ ನೋಡಲು ಪಟ್ಟಣದ ಜನ ಮನೆ-ಅಂಗಡಿಗಳಿಂದ ಹೊರಬಂದು ಹೆಲಿಕ್ಯಾಪ್ಟರ್‌ನತ್ತ ಕೈ ಬೀಸಿದರು.

ಪ್ರತಿಷ್ಠಾಪನೆ : ಸಂಜೆ ವಡೆಯರ್ ಬಸಾಪುರ, ಜಿ.ಬೇವಿನಹಳ್ಳಿ, ಹಳ್ಳಿಹಾಳ್, ಕೊಕ್ಕನೂರು, ಹಿಂಡಸಘಟ್ಟ, ಗೋವಿನಹಾಳ್, ನಂದಿಗುಡಿ, ವಾಸನ, ಕೆ.ಎನ್.ಹಳ್ಳಿ, ಸಿರಿಗೆರೆ, ಲಕ್ಕಶೆಟ್ಟಿಹಳ್ಳಿ, ಯಲವಟ್ಟಿ, ಜಿಗಳಿ ಗ್ರಾಮಗಳಲ್ಲಿ ಸಂಚರಿಸಿದ ಶೋಭಾಯಾತ್ರೆಯು ರಾತ್ರಿ ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನ ತಲುಪಿತು. ಇದೇ ದಿನಾಂಕ 22ರವರೆಗೂ ಭಕ್ತರ ದರ್ಶನಕ್ಕಾಗಿ 108 ಶಿವಲಿಂಗಗಳನ್ನು ವೀರಭದ್ರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. 

ಹಿರಿಯರಾದ ಬಿ.ಪಂಚಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಸಿರಿಗೆರೆಯ ನಾಗನಗೌಡ್ರು, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ರೈಸ್ ಮಿಲ್ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ, ತಳಸದ ಬಸವರಾಜ್, ಹೆಚ್.ಎಸ್.ವೀರಭದ್ರಯ್ಯ, ಹೆಚ್.ಎಸ್.ರುದ್ರಯ್ಯ, ಪೂಜಾರ್ ರೇವಣಪ್ಪ, ಡಾ. ಬಸವರಾಜ್ ಕಲಾಲ್, ಬಂಗಾರದ ಅಂಗಡಿ ರಾಜಣ್ಣ, ಮಲ್ಲನಾಯ್ಕನಹಳ್ಳಿ ಮಾಲತೇಶ್, ಕುಂಬಳೂರಿನ ಬಿ.ಶಂಭುಲಿಂಗಪ್ಪ, ಜಿಗಳಿಯ ಕೆ.ಷಣ್ಮುಖಪ್ಪ, ಮುದ್ದಪ್ಳ ಶಿವಶಂಕರ್, ನಾಗಸನಹಳ್ಳಿ ಮಹೇಶ್ವರಪ್ಪ, ಗೌಡ್ರ ಬಸವರಾಜಪ್ಪ, ಕುಣೆಬೆಳಕೆರೆಯ ರಾಮು, ಶಿವಕ್ಳ ಆಂಜನೇಯ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!