ಬಾಪೂಜಿ ಶಾಲೆ ‘ಉತ್ಸವ್ ಚಿಣ್ಣರ ಘಟಿಕೋತ್ಸವ’ದಲ್ಲಿ ಶಿಕ್ಷಣಾಧಿಕಾರಿ ಡಾ. ಪುಷ್ಪಲತಾ
ದಾವಣಗೆರೆ,ಮಾ.6- ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ `ಉತ್ಸವ್ ಚಿಣ್ಣರ ಘಟಿಕೋತ್ಸವ’ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಲತ ಮಾತನಾಡಿ, ವಿದ್ಯಾರ್ಥಿಗಳ ಆಸಕ್ತಿ ಹಾಗೂ ಬುದ್ಧಿವಂತಿಕೆಗೆ ತಕ್ಕಂತೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು ಮತ್ತು ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆ ಯ ವ್ಯಕ್ತಿಗಳಾಗುವಂತೆ ಶ್ರೇಷ್ಠ ಶಿಕ್ಷಣವನ್ನು ಧಾರೆ ಎರೆಯಬೇಕೆಂದು ಹೇಳಿದರು.
ಶಾಲೆಯ ಮುಖ್ಯಸ್ಥರಾದ ಮಂಜುನಾಥ ರಂಗರಾಜು ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ಪ್ರತಿ ಯೊಬ್ಬ ವಿದ್ಯಾರ್ಥಿಯಲ್ಲಿಯೂ ಸಹ ತನ್ನದೇ ಆದ ಸಾಮರ್ಥ್ಯವಿದ್ದು ಅದನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವನಿತಾ ಜೆ.ಎಸ್ ಮಾತನಾಡಿ, ವಿದ್ಯಾರ್ಥಿಗಳ ಆಸೆ ಮತ್ತು ಆಕಾಂಕ್ಷೆಗಳಿಗೆ ಅವಕಾಶ ಮಾಡಿ ಕೊಟ್ಟು ಅಕ್ಷರ ಅಭ್ಯಾಸವನ್ನು ಮಾಡಿಸಬೇಕು. ಅಲ್ಲದೇ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಅವರ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ಕೊಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಮಾರ್ಗದರ್ಶಕ ಮಂಜಪ್ಪ ಸಿ, ಪ್ರೌಢಶಾಲಾ ವಿಭಾಗದ ಪ್ರಭಾರಿಗಳಾದ ಪ್ರಭು ಪಿ.ವಿ, ಶ್ರೀಮತಿ ಸವಿತಾ ರಮೇಶ್, ಪ್ರಾಥಮಿಕ ವಿಭಾಗದ ಪ್ರಭಾರಿಗಳಾದ ಶ್ರೀಮತಿ ಶೀಭಾರಾಣಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಾರ್ಥನೆ ಗೀತೆಯನ್ನು ಸಮಯ ಮತ್ತು ಸಂಗಡಿಗರು ಹಾಡಿದರು. ಅನಿಕಾ, ದೇವಿಕಾ, ನೀತಿ ಮತ್ತು ಸಂಗಡಿಗರು ನೃತ್ಯ ಮಾಡಿದರು. ನಿರೂಪಣೆಯನ್ನು ಸಾರಾ ಮತ್ತು ಅಶ್ವಿನಿ ನಡೆಸಿಕೊಟ್ಟರು.