ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಿವಿಮಾತು
ಬೆಂಗಳೂರು, ಮಾ.5- ಮಾಧ್ಯಮ ಗಳು ಸಮಾಜಕ್ಕೆ ಮೌಢ್ಯ ಹಾಗೂ ಮೂಢನಂಬಿಕೆಗಳನ್ನು ಬಿತ್ತಬಾರದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದ ಕೆ.ಜಿ.ರಸ್ತೆಯ ಕಂದಾಯ ಭವನದಲ್ಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಇಂದು ನಡೆದ `ಮೌಢ್ಯ, ಮೂಢನಂಬಿಕೆ ಮತ್ತು ಮಾಧ್ಯಮ’ ವಿಷಯದ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಜನರು ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನೇ ಸತ್ಯ ಎಂಬುದಾಗಿ ನಂಬುವು ದರಿಂದ ಮಾಧ್ಯಮಗಳು ಬಹಳ ಎಚ್ಚರಿಕೆ ವಹಿಸಿ, ಜನಸಾಮಾನ್ಯರಿಗೆ ಸತ್ಯವನ್ನು ಬಿತ್ತರಿಸಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಮೌಢ್ಯ, ಕಂದಾಚಾರ ಗಳೇ ಹೆಚ್ಚುತ್ತಿರುವ ಸನ್ನಿವೇಶದಲ್ಲಿ ದೇಶದ ಮೂಲೆ ಮೂಲೆಯನ್ನು ತಲುಪುವ ಮಾಧ್ಯಮಗಳು ಜನರಿಗೆ ಸಂವಿಧಾನವ ಅರಿವನ್ನು ಮೂಡಿಸಬೇಕು. ಮೂಢನಂಬಿಕೆಗಳಿಂದ ತುಂಬಿರುವ ಸಮಾಜಕ್ಕೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಹೇಳಬೇಕು ಎಂದು ಅವರು ತಿಳಿಸಿದರು.
ಸಂವಿಧಾನ ನಮಗೆ ಮೌಢ್ಯ ಹಾಗೂ ಮೂಢನಂಬಿಕೆಗಳಿಂದ ಮುಕ್ತಗೊಳಿಸುತ್ತದೆ. ಆದುದರಿಂದ ನಾವು ಸಂವಿಧಾನವನ್ನು ಎಲ್ಲರೂ ತಿಳಿದುಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಸಂವಿಧಾನ ಜಾಗೃತಿಯಂತಹ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದೆವು ಎಂದು ಸತೀಶ್ ಜಾರಕಿಹೊಳಿ ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಸೇರಿ ಹಲವರು ಉಪಸ್ಥಿತರಿದ್ದರು.