ಆಂಗ್ಲಭಾಷಾ ನಾಮಫಲಕ ತೆರವು ವಿಳಂಬ ಪಾಲಿಕೆಗೆ ಬೀಗ ಜಡಿದು ಪ್ರತಿಭಟನೆ

ಆಂಗ್ಲಭಾಷಾ ನಾಮಫಲಕ ತೆರವು ವಿಳಂಬ ಪಾಲಿಕೆಗೆ ಬೀಗ ಜಡಿದು ಪ್ರತಿಭಟನೆ

ದಾವಣಗೆರೆ, ಮಾ. 5 – ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಂಗ್ಲಭಾಷಾ ನಾಮಫಲಕ ಹಾಗೂ ಜಾಹೀರಾತು ಫಲಕಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡರ ಬಣ) ಕಾರ್ಯಕರ್ತರು ಪಾಲಿಕೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಇದೇ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಕಳೆದ 25 ವರ್ಷಗಳಿಂದ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಸಂರಕ್ಷಣೆಯ  ನಿಟ್ಟಿನಲ್ಲಿ ಕರವೇ ಹೋರಾಟ ಮಾಡುತ್ತಲೇ ಬಂದಿದೆ. ಕರ್ನಾಟ ಕದಲ್ಲಿ ಕನ್ನಡ ಭಾಷೆ, ಕನ್ನಡಿಗನೇ ಸಾರ್ವ ಭೌಮ. ಆಂಗ್ಲಭಾಷಾ ನಾಮಫಲಕಗಳಿಗೆ ಮಸಿ ಬಳಿಯುವುದು, ಕಿತ್ತು ಹಾಕುವ ಮೂಲಕ ಹೋರಾಟ ನಡೆಸುತ್ತಾ ಬಂದಿದೆ ಎಂದರು.

ಇತ್ತೀಚಿಗೆ ಪಾಲಿಕೆ ಸಭೆಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡುವ ಮೂಲಕ ಮತ್ತು ಸಾರ್ವಜನಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡಿದೆ. ಆದರೂ ಕಾಟಾಚಾರದ ಕನ್ನಡಿಗರು ಆಂಗ್ಲ ನಾಮಫಲಕಗಳನ್ನು ಇಟ್ಟೂಕೊಂಡಿದ್ದರು. ಪಾಲಿಕೆಗೆ ತೆರವುಗೊಳಿಸುವಂತೆ ಒತ್ತಡ ತಂದಾಗ ನಗರದಲ್ಲಿ ಶೇ. 60 ರಷ್ಟು ನಾಮಫಲಕಗಳಿಗೆ ಮಸಿ ಬಳಿದು ಕಿತ್ತು ಹಾಕಲಾಗಿತ್ತು ಎಂದು ಹೇಳಿದರು.

ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ 60;40 ರ ಅನುಪಾತದಲ್ಲಿ ಅಂದರೆ ಅಂಗಡಿ ಮಾಲೀಕರು ಅಥವಾ ಸಂಸ್ಥೆ ಮಾಲೀಕರು ಹಾಕುವ ಬೋರ್ಡಿನ ಅನುಸಾರ ಶೇ. 60 ರಷ್ಟು ದೊಡ್ಡದಾಗಿ ಕನ್ನಡದಲ್ಲಿ ನಾಮಫಲಕ ಹಾಕಬೇಕೆಂದು ಆದೇಶಿಸಿದೆ. ಆದರೆ, ಪಾಲಿಕೆ ಆಯುಕ್ತರು ನಾಮಫಲಕ ವಿಚಾರವಾಗಿ ಉಸ್ತುವಾರಿಯನ್ನಾಗಿ ಪಾಲಿಕೆಯ ವೈದ್ಯಾಧಿಕಾರಿ ಡಾ. ಚಂದ್ರಮೋಹನ್ ಅವರನ್ನು ನೇಮಿಸಿತ್ತು. ನಾವು ಅವರಿಗೆ ಆಂಗ್ಲಭಾಷೆಯಲ್ಲಿರುವ ಸುಮಾರು 300 ಜಾಹೀರಾತು ಫಲಕ, ಪೆಟ್ರೋಲ್ ಬಂಕ್, ಶಾಲಾ-ಕಾಲೇಜು, ಅಂಗಡಿ ಮುಂಗಟ್ಟುಗಳ ಆಂಗ್ಲಭಾಷಾ ಫಲಕಗಳ ಛಾಯಾಚಿತ್ರಗಳನ್ನು ಕಳಿಹಿಸಿದ್ದು, ಆದರೆ ಕಾಟಾಚಾರಕ್ಕೆ ನೋಟಿಸ್ ನೀಡಿ ಮೌನ ವಹಿಸಿರುವುದು ಸರಿಯಲ್ಲ. ಮಾಲೀಕರ ಜೊತೆಗೆ ಶಾಮೀಲಾಗಿದ್ದಾರೆಂಬ ಶಂಕೆ ಇದೆ ಎಂದರು.

ಬೇರೆ ಜಿಲ್ಲೆಗಳಲ್ಲಿ ಆಯುಕ್ತರು ಮತ್ತು ಸಿಬ್ಬಂದಿ ವರ್ಗದವರು ಆಂಗ್ಲ ಭಾಷಾ ನಾಮಫಲಕಗಳಿರುವ ಅಂಗಡಿಗಳಿಗೆ ಬೀಗ ಹಾಕಿಸಿ, ಅವುಗಳನ್ನು ಕಿತ್ತು ಹಾಕುವ ಕೆಲಸವನ್ನು ಮಾಡಿದ್ದಾರೆ. ಆದರೆ ದಾವಣಗೆರೆ ಮಹಾನಗರ ಪಾಲಿಕೆ ಮೌನ ವಹಿಸಿರುವುದನ್ನು ಕರವೇ ಸಹಿಸುವುದಿಲ್ಲ. ಕೂಡಲೇ ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

ಇದೇ ದಿನಾಂಕ 13 ರೊಳಗಾಗಿ ಕನ್ನಡದಲ್ಲಿಯೇ ನಾಮಫಲಕಗಳಿರಬೇಕೆಂದು ಸರ್ಕಾರ ಆದೇಶಿಸಿದೆ. ಆಯುಕ್ತರಾಗಲೀ, ಮಹಾಪೌರರಾಗಲೀ ಯಾವುದೇ ಸಭೆ ಕರೆ ದಿಲ್ಲ. ತಕ್ಷಣ ಸಭೆ ನಡೆಸಿ, ಪಾಲಿಕೆ ಆಯುಕ್ತರು ಫ್ಲೆಕ್ಸ್, ಪ್ರಿಂಟರ್, ಡಿಸೈನ್ ಮಾಡುವವರಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್ ಅವರಿಗೆ ಮನವಿ ಸಲ್ಲಿಸಿ, ದಿನಾಂಕ 10 ರೊಳಗೆ ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ದಿನಾಂಕ 10 ರ ಸಂಜೆ 5 ಕ್ಕೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ  ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ , ಹರಿಹರ ತಾಲ್ಲೂಕು ಅಧ್ಯಕ್ಷೆ ನೇತ್ರಾವತಿ, ಮಾಲಾ ಮಲ್ಲಿಕಾರ್ಜುನ್, ಗೋಪಾಲ್ ದೇವರಮನಿ, ಎನ್.ಟಿ. ಹನುಮಂತಪ್ಪ, ಜಿಎಸ್ ಸಂತೋಷ್, ಜಬಿವುಲ್ಲಾ, ಆಟೋ ರಫೀಕ್, ಖಾದರ್ ಬಾಷಾ, ರವಿಕುಮಾರ್, ರಾಜೇಶ್, ಶಶಿಕುಮಾರ್, ಮಹಾಂತೇಶ್, ಸುರೇಶ್, ಮುನ್ನ, ರುದ್ರಗೌಡರು, ಅಮಾನುಲ್ಲಾ ಖಾನ್, ಮುಸ್ತಾಫ,ಸುರೇಶ್. ರಾಘವೇಂದ್ರ, ವಿನಯ್, ಮಂಜು, ಚಂದ್ರು, ಕರಿಯಪ್ಪ, ತುಳಸೀರಾಮ್, ಕರಿಬಸಪ್ಪ, ರಾಜೇಶ್, ದಾದಾಪೀರ್  ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!