ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ
ರಾಣೇಬೆನ್ನೂರು, ಮಾ. 4- ದಶಕಗಳಿಂದ ಕೇಂದ್ರದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಮುನ್ನಡೆ ಯುತ್ತಲೇ ಇರುವ ಓಬಿರಾಯನ ಕಾಲದ, ಕಾರ್ಯಕ್ರಮ ವಾಗಿದೆ. ಪೋಲಿಯೋ ಸಂಪೂರ್ಣ ನಿರ್ಮೂಲನೆ ಆಗಿ ದಶಕಗಳೇ ಉರುಳಿವೆ. ಆದರೂ ಈ ಕಾರ್ಯಕ್ರಮವನ್ನು ಸರ್ಕಾರ ಮುಂದುವರೆಸುತ್ತಾ ಸಾವಿರಾರು ಕೋಟಿ ಲೂಟಿ ಹೊಡೆಯುತ್ತಿದೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಆರೋಪಿಸಿದ್ದಾರೆ.
ಮುಷ್ಟೂರು ಗ್ರಾಮದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಜಾಗತಿಕ ಮಟ್ಟದ ಕಾಯಿಲೆಯ ನಿರ್ಮೂಲನೆಗೆ ಇಷ್ಟು ವರ್ಷ ತೆಗೆದುಕೊಂಡಿರುವುದು ರಾಷ್ಟ್ರೀಯ ಆರೋಗ್ಯ ಮಿಷನ್ನಿನ ಒಂದು ಅವೈಜ್ಞಾನಿಕ ನೀತಿಯಾ ಗಿದೆ. ಕಾಯಿಲೆ ಎಲ್ಲಿರುವುದು, ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಎಷ್ಟು? ಇದುವರೆಗೂ ಈ ಕಾರ್ಯಕ್ರಮಕ್ಕೆ ಮಾಡಿದ ಅನುದಾನ ಎಷ್ಟು? ಎಂಬುದನ್ನು ಜಿಲ್ಲಾ ಮಟ್ಟದಿಂದಲೇ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕೆಂದು ಒತ್ತಾಯಿಸಿದರು.
ವೈದ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ರಾಜಕಾರಣಿಗಳು ‘ಲೂಟಿ’ ಹೊಡೆಯಲೆಂದೇ, ಕಾಯಿಲೆ ಸಂಪೂರ್ಣ ನಿರ್ಮೂಲನೆ ಆಗಿದ್ದರೂ ಕೂಡಾ ಪಲ್ಸ್ ಪೊಲಿಯೋ ಹೆಸರಿನ ರಾಷ್ಟ್ರೀಯ ಆರೋಗ್ಯ ಮಿಷನ್ನಿನ ದಂಧೆ ಇದಾಗಿದೆ. ಕೂಡಲೇ ಈ ಕಾರ್ಯಕ್ರಮವನ್ನು ಸಂಪೂರ್ಣ ನಿಲ್ಲಿಸಿ ಜೀವನ್ಮರಣದ ಮಾರಣಾಂತಿಕ ಕಾಯಿಲೆ ‘ಕ್ಷಯ’ ರೋಗದತ್ತ ಸರ್ಕಾರ ಲಕ್ಷ್ಯ ಕೊಟ್ಟು ಕ್ಷಯ ರೋಗ ಸಂಪೂರ್ಣ ನಿರ್ಮೂಲನೆಗೆ ಒತ್ತು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಜನರು ಕ್ಷಯಕ್ಕೆ ತುತ್ತಾಗುತ್ತಿದ್ದಾರೆ. ಈ ಕಾಯಿಲೆ ಪತ್ತೆ ಹಚ್ಚಲಿಕ್ಕೆಂದೇ ಇರುವ ಸಿ.ಬಿ. ನೆಟ್ ಮಿಷನ್, ಕಫ ಪರೀಕ್ಷೆ ಮಿಷನ್ ಎಲ್ಲಾ ತಾಲ್ಲೂಕು ಕೇಂದ್ರ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದ್ದರೆ ಮಾತ್ರ ಈ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಬಹುದು. ಕಳೆದ 2 ವರ್ಷಗಳ ಹಿಂದಿನ ಕೊರೊನಾ ಪರಿಸ್ಥಿತಿಯನ್ನು ಈಗ ಎಲ್ಲರೂ ಮೈ ಮರೆತಂತೆ ಕಾಣುತ್ತಿದೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯತನವೆ ಲಕ್ಷಾಂತರ ಜನರ ಸಾವಿಗೆ ಕಾರಣವಾದದ್ದನ್ನು ಸ್ಮರಿಸಿ ಮುನ್ನಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
ವೇದಿಕೆಯ ಮೇಲೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಚಂದ್ರಮ್ಮ ಆರ್. ಹಿರೇಮರದ, ಎಸ್.ಡಿ.ಎಂ.ಸಿ ಅಧ್ಯಕ್ಷ ಯಲ್ಲಪ್ಪ ಓಲೇಕಾರ, ಗ್ರಾ.ಪಂ. ಸದಸ್ಯರಾದ ಬಸಮ್ಮ ತಳವಾರ, ರಾಜು ಪಾಟೀಲ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹರಿಹರಗೌಡ ಪಾಟೀಲ, ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ಎನ್. ಕುಮಾರ, ಸಿ.ಎಚ್.ಸಿ. ಟಿ. ಅಶ್ವಿನಿ ಮತ್ತು ಇತರರು ಉಪಸ್ಥಿತರಿದ್ದರು.