ಯಾವ ಮಗವೂ ಶಿಕ್ಷಣದಿಂದ ವಂಚಿತವಾಗಬಾರದು

ಯಾವ ಮಗವೂ ಶಿಕ್ಷಣದಿಂದ ವಂಚಿತವಾಗಬಾರದು

ಬನ್ನಿಕೋಡು : ಶಾಲಾ ಕಟ್ಟಡ ಉದ್ಘಾಟನೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಕಳಕಳಿ

ಮಲೇಬೆನ್ನೂರು, ಮಾ. 4- ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಲು ಮೊದಲ ಆದ್ಯತೆ ನೀಡಬೇಕೆಂದು ಭೂ ವಿಜ್ಞಾನ, ಗಣಿ ಮತ್ತು ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಭಾನುವಾರ ಬನ್ನಿಕೋಡು ಗ್ರಾಮದಲ್ಲಿ ನಿರ್ಮಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳೂ ಸಹ ಶ್ರದ್ಧೆಯಿಂದ ಓದಿ ಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸುವ ಮೂಲಕ ತಂದೆ-ತಾಯಿಗಳಿಗೆ ಮತ್ತು ಶಾಲೆಗೆ, ಗುರುಗಳಿಗೆ ಕೀರ್ತಿ ತರಬೇಕೆಂದು ತಿಳಿಸಿದರು.

ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಸಮಾಜದಲ್ಲಿ ಯಾವ ಮಗುವೂ ಶಿಕ್ಷಣದಿಂದ ವಂಚಿತ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕೆಂದು ಸಚಿವ ಮಲ್ಲಿಕಾರ್ಜುನ್ ಹೇಳಿದರು.

ಶಾಲಾ ಕಟ್ಟಡವನ್ನು ಸುಂದರವಾಗಿ ಕಟ್ಟಿದ್ದು, ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ ಮತ್ತು ಸಿಬ್ಬಂದಿಗಳ ನೇಮಕವನ್ನೂ ಮಾಡುತ್ತೇವೆ.

ಈ ಹಿಂದೆ ಬಿ.ಹೆಚ್. ಗಿರಿಗೌಡ್ರು ಇದ್ದಾಗ ಈ ಊರಿಗೆ ತುಂಬಾ ಸಲ ನಮ್ಮನ್ನು ಕರೆತಂದಿದ್ದರು. ಅವರು ಊರಿನ ಅಭಿವೃದ್ಧಿ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರೆಂದು ಸಚಿವ ಮಲ್ಲಿಕಾರ್ಜುನ್ ಸ್ಮರಿಸಿದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹನಗವಾಡಿ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ರವಿಕುಮಾರ್, ಉಪಾಧ್ಯಕ್ಷ ಕೆ.ಎಸ್. ಬಸವರಾಜ್, ಡಿಡಿಪಿಐ ಕೊಟ್ರೇಶ್, ಶಾಲೆಯ ಪ್ರಿನ್ಸಿಪಾಲ್ ಶಶಿಧರ್, ಉಪ ಪ್ರಾಚಾರ್ಯ ವಿ.ಬಿ. ಕೊಟ್ರೇಶ್, ಶಿಕ್ಷಕ ರಿಯಾಜ್ ಅಹ್ಮದ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಹೇಮಾಕ್ಷಿ ಸಿದ್ದಪ್ಪ, ಗ್ರಾಮದ ಶಿವಣ್ಣ ಬಣಕಾರ್, ಅಂಗಡಿ ಜಯ್ಯಪ್ಪ, ಪಿಡಬ್ಲ್ಯುಡಿ ಇಇ ನರೇಂದ್ರಬಾಬು, ಎಇಇ ಶಿವಮೂರ್ತಿ, ಗುತ್ತಿಗೆದಾರ ಎಂ. ಸುನೀಲ್ ಮತ್ತು ಇತರರು ಭಾಗವಹಿಸಿದ್ದರು.

2 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಶಾಲಾ ಕಟ್ಟಡ ಕಾಮಗಾರಿಗೆ ಎಸ್. ರಾಮಪ್ಪ ಶಾಸಕರಾಗಿದ್ದಾಗ ಗುದ್ದಲಿ ಪೂಜೆ ನೆರವೇರಿಸಿದ್ದರು. ಈ ನೂತನ ಕಟ್ಟಡದಲ್ಲಿ 13 ಕೊಠಡಿಗಳಿವೆ.

error: Content is protected !!