ಭಾರತದ ಘನತೆಯನ್ನು ಎತ್ತರಕ್ಕೆ ಏರಿಸಿದ ಸಿ.ವಿ.ರಾಮನ್‌

ಭಾರತದ ಘನತೆಯನ್ನು ಎತ್ತರಕ್ಕೆ ಏರಿಸಿದ ಸಿ.ವಿ.ರಾಮನ್‌

ದಾವಣಗೆರೆ, ಫೆ. 28 – ನಗರದ ಮೋತಿವೀರಪ್ಪ ಪ್ರೌಢಶಾಲೆಯಲ್ಲಿ ಸರ್ ಸಿ.ವಿ. ರಾಮನ್ ಶತಮಾನೋತ್ಸವದ ಸ್ಮರಣೆಯ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಬಾಪೂಜಿ ತಾಂತ್ರಿಕ ವಿದ್ಯಾಲಯದ ಸಹ ಪ್ರಾಧ್ಯಾಪಕ ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ಪೂರ್ವಜರ ಅಪರೂಪದ ಸಂಶೋಧನೆಗಳ ಕಾರಣದಿಂದ ಮನುಷ್ಯ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಉಪಪ್ರಾಂಶು ಪಾಲರಾದ ಕಲ್ಪಿತ ರಾಣಿ ಮಾತನಾಡಿ, ಭಾರತಕ್ಕಷ್ಟೇ ಅಲ್ಲದೆ, ಆ ಕಾಲದ ಏಷ್ಯಾ ಖಂಡದಲ್ಲಿಯೇ ಪ್ರಪ್ರಥಮ ಬಾರಿಗೆ ಭೌತಶಾಸ್ತ್ರದ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ಪಡೆದ ಮೊಟ್ಟಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ರಾಮನ್ ಪಾತ್ರರಾದರು.ಅತ್ಯುನ್ನತ ಪ್ರಶಸ್ತಿಗಳಾದ ಭಾರತ ರತ್ನ, ನೊಬೆಲ್, ಮಟ್ಟಿಕ್ಯುಸಿ ಪ್ರಶಸ್ತಿ, ಫ್ರಾಂಕ್ಲಿನ್ ಪ್ರಶಸ್ತಿ, ಲೆನಿನ್ ಶಾಂತಿ ಪ್ರಶಸ್ತಿ. ಹೀಗೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾದ ಸಿ.ವಿ.ರಾಮನ್ ಭಾರತದ ಘನತೆಯನ್ನು ಎತ್ತರಕ್ಕೆ ಏರಿಸಿದರು ಎಂದರು.

82 ವರುಷಗಳ ಕಾಲ ಅರ್ಥಪೂರ್ಣ ಜೀವನ ಸಾಗಿಸಿದ ರಾಮನ್ ಅವರ ಮರಣಾನಂತರವೂ ಜಗತ್ತು ಅವರ ಸಾಧನೆಗಳನ್ನು ಕೊಂಡಾಡುತ್ತಿದೆ.

1987 ರಲ್ಲಿ ರಾಮನ್ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಕೃತಜ್ಞತೆಯಿಂದ ಭಾರತವು ಫೆ. 28ನೇ ತಾರೀಖಿನ ಈ ದಿನವನ್ನು ಸರ್ ಸಿ.ವಿ. ರಾಮನ್  ಅವರ ನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಎಂದು ಇಡೀ ಭಾರತದಾದ್ಯಂತ ಆಚರಿಸಲಾಗುತ್ತಿದೆ.

ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಿಕೊಂಡು, ಸರ್.ಸಿ.ವಿ. ರಾಮನ್, ಹೋಮಿ ಜಹಾಂಗೀರ್ ಬಾಬಾ, ಜಗದೀಶ್ ಚಂದ್ರ ಬೋಸ್ ರೀತಿಯಲ್ಲಿ  ವಿಜ್ಞಾನಿಗಳಾಗಿ ದೇಶಕ್ಕೆ, ಮನುಜ ಕುಲಕ್ಕೆ ಕೊಡುಗೆ ನೀಡುವಂತೆ  ಉಪ ಪ್ರಾಂಶುಪಾಲ ಕಲ್ಪಿತರಾಣಿ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ನಿರ್ದೇಶಕರಾದ ಆನಂದ್, ಬಿ.ಆರ್.ಸಿ. ಕೇಂದ್ರದ ಭುವನೇಶ್ವರಿ, ಹಿರಿಯ ಶಿಕ್ಷಕರಾದ ಮಹದೇವಪ್ಪ, ನಾಗರತ್ನ, ಕುಬೇರ ನಾಯ್ಕ್, ನಾಗರಾಜ್, ಚೇತನಾ, ಸುಜಾತ, ಸೇರಿದಂತೆ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವವನ್ನು ಉತ್ತೇಜಿಸುವ ಪ್ರತಿಜ್ಞಾ ವಿಧಿಯನ್ನು ಹಿರಿಯ ಶಿಕ್ಷಕರಾದ ಮಹದೇವಪ್ಪ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ನಾಗರತ್ನ ಸ್ವಾಗತಿಸಿ, ಅಮೃತಾ ವಂದಿಸಿದರು.

error: Content is protected !!