ಹೊನ್ನಾಳಿ, ಫೆ. 28- ತಾಲ್ಲೂಕಿನ ಘಂಟಾಪುರ ಗ್ರಾಮದ ಶ್ರೀ ವೀರಭದ್ರಸ್ವಾಮಿ ಕೆಂಡದಾರ್ಚನೆ, ಪಲ್ಲಕ್ಕಿ ಮಹೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಇಂದು ನೆರವೇರಿತು.
ನ್ಯಾಮತಿ ಪಟ್ಟಣ ಮತ್ತು ಕುಂಕುವ ಗ್ರಾಮದ ಪುರವಂತರಿಂದ ಖಡ್ಗ ಪ್ರದರ್ಶನದೊಂದಿಗೆ ವೀರಗಾಸೆ ನೃತ್ಯ ಪ್ರದರ್ಶನ ನಡೆಯಿತು.
ಪುರುವಂತರು ಕಲಾವಿದರ ಸಮಾಳ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ವೀರಗಾಸೆ ನೃತ್ಯ ಮಾಡು ತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ವೀರಭದ್ರ ಸ್ವಾಮಿಯ ಅವತಾರ ನಿರೂಪಿಸುವ ಹಾಗೂ ದಕ್ಷ ಬ್ರಹ್ಮನ ಪೌರಾಣಿಕ ಕತೆಗಳನ್ನು ಪುರವಂತರು ಹೇಳುತ್ತಾ ನರ್ತನ ಮಾಡಿದರು. ನಂತರ ಪುರುವಂತರು ಬಾಳೆಗಿಡವನ್ನು ಕತ್ತರಿಸಿದರು.
ಹರಕೆ ಹೊತ್ತ ಮಹಿಳೆಯರು, ಪುರುಷರು ಪುರುವಂತರಿಂದ ಶಸ್ತ್ರಗಳನ್ನು ಬಾಯಿಗೆ ಹಾಗೂ ದೇಹದ ಇತರೆ ಭಾಗಗಳಿಗೆ ಹಾಕಿಸಿಕೊಳ್ಳುತ್ತಿದ್ದ ದೃಶ್ಯ ರೋಮಾಂಚನಕಾರಿಯಾಗಿತ್ತು.
ವಿವಿಧ ದೇವರುಗಳ ಉತ್ಸವ ಮೂರ್ತಿಗಳು ಪಲ್ಲಕ್ಕಿಯಲ್ಲಿ ಪ್ರದಕ್ಷಿಣೆ ಹಾಕಿದ ನಂತರ ಕೆಂಡ ದಾರ್ಚನೆ ನಡೆಯಿತು. ದೇವರ ಉತ್ಸವ ಮೂರ್ತಿ ಇದ್ದ ಪಲ್ಲಕ್ಕಿಯನ್ನು ಹೊತ್ತ ಭಕ್ತರು, ಅರ್ಚಕರು ಕೆಂಡ ಹಾಯ್ದರು. ಬಳಿಕ ನೂರಾರು ಭಕ್ತರು ಕೆಂಡ ಹಾಯ್ದರು. ನಂತರ ಮಹಾ ಪ್ರಸಾದ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ಶ್ರೀ ವೀರಭದ್ರಸ್ವಾಮಿ ಕೆಂಡದರ್ಚನೆ ಮಹೋತ್ಸವದಲ್ಲಿ ಪಾಲ್ಗೊಂಡರು. ಜಿ.ಪಂ.ಮಾಜಿ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಮಾರುತಿನಾಯ್ಕ ಮತ್ತು ಇತರರು ಉಪಸ್ಥಿತರಿದ್ದರು.