ಭ್ರಷ್ಟಾಚಾರ ನಿರ್ಮೂಲನೆಗೆ ಆರ್‌ಟಿಐ ಬ್ರಹ್ಮಾಸ್ತ್ರ

ಭ್ರಷ್ಟಾಚಾರ ನಿರ್ಮೂಲನೆಗೆ ಆರ್‌ಟಿಐ ಬ್ರಹ್ಮಾಸ್ತ್ರ

ಹೇಮಂತ್ ನಾಗರಾಜ್

ದಾವಣಗೆರೆ, ಫೆ.27- ಭ್ರಷ್ಟಾಚಾರ ನಿರ್ಮೂಲನೆಗೆ ಮಾಹಿತಿ ಹಕ್ಕು ಕಾಯ್ದೆಯು ಬ್ರಹ್ಮಾಸ್ತ್ರದಂತಿದ್ದು, ಇದನ್ನು ಬಳಸಿಕೊಂಡು ಸ್ವಚ್ಛ ಸಮಾಜ ನಿರ್ಮಿಸಬೇಕಿದೆ ಎಂದು ಕರ್ನಾಟಕ ಮಾಹಿತಿ ಹಕ್ಕು ವೇದಿಕೆ ರಾಜ್ಯಾಧ್ಯಕ್ಷ ಹೇಮಂತ್ ನಾಗರಾಜ್ ತಿಳಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಭ್ರಷ್ಟಾಚಾರವು ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಮೇಲ್ಮಟ್ಟದವರೆಗೂ ವ್ಯಾಪಿಸಿದೆ. ಕಾಮಗಾರಿಗಳ ಗುತ್ತಿಗೆದಾರರು ಕಮೀಷನ್ ನೀಡದ ಹೊರತು ಬಿಲ್ ಪಾಸ್ ಆಗುತ್ತಿಲ್ಲ. ಕಮೀಷನ್ ಕೊಟ್ಟು, ತನ್ನ ಲಾಭಾಂಶ ತೆಗೆದುಕೊಂಡು ಉಳಿದ ಹಣದಲ್ಲಿ ಮಾಡುವ ಕಾಮಗಾರಿ ಸಹಜವಾಗಿಯೇ ಕಳಪೆ ಮಟ್ಟದ್ದಾಗುತ್ತದೆ. ಈ ರೀತಿ ಸಾರ್ವಜನಿಕರ ಹಣ ದುರುಪಯೋಗ ಆಗುವುದನ್ನು ತಡೆಯಲು ಆರ್.ಟಿ.ಐ ಬಳಕೆಯಾಗಬೇಕು ಎಂದು ಅವರು ಆಶಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಆರ್.ಟಿ.ಐ. ಕಾರ್ಯಕರ್ತರ ಬಗ್ಗೆ ಸಾಕಷ್ಟು ತಪ್ಪು ಭಾವನೆ ಇದೆ. ಆದರೆ ಅಧಿಕಾರಿ, ನೌಕರರು ಪ್ರಾಮಾಣಿಕವಾಗಿದ್ದರೆ ಯಾರಿಗೂ ಭಯಪಡುವ ಅಗತ್ಯವಿಲ್ಲ. ಭ್ರಷ್ಟಾಚಾರ ಎಂಬುದು ವ್ಯವಸ್ಥೆಗೆ ಮಾರಕವಾಗಿದೆ. ಮಾಹಿತಿ ಹಕ್ಕು ವೇದಿಕೆ ಕಾರ್ಯಕರ್ತರು ಭ್ರಷ್ಟರನ್ನು ಬಯಲಿಗೆಳೆಯುವ ಮೂಲಕ ಒಳ್ಳೆಯ ವ್ಯವಸ್ಥೆಗೆ ಕಾರಣರಾಗಬೇಕು ಎಂದು ಆಶಿಸಿದರು.

ವೇದಿಕೆಯ ಧಾರವಾಡ ಘಟಕದ ಪ್ರಧಾನ ಕಾರ್ಯದರ್ಶಿ ಪರಶುರಾಮ ಬಗಲಿ ಮಾತನಾಡಿ, ಭ್ರಷ್ಟಾಚಾರ ವ್ಯವಸ್ಥೆಗೆ ಅಂತ್ಯ ಹಾಡಲು ಮಾಹಿತಿ ಹಕ್ಕು ಕಾಯ್ದೆಯನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಎಲ್ಲರೂ ಒಟ್ಟಾಗಿ ಸದೃಢವಾಗಿ ಕಾರ್ಯನಿರ್ವಹಿಸಬೇಕು ಎಂದರು.

ವೇದಿಕೆಯ ಜಿಲ್ಲಾಧ್ಯಕ್ಷ ಯು.ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ರಾಜ್ಯ ಸಮಿತಿ ಸದಸ್ಯ ಗುರುರಾಜ್, ರಾಜ್ಯ ಉಪಾಧ್ಯಕ್ಷ ಕೆ.ಟಿ.ಮಧು, ಪತ್ರಕರ್ತ ಹೆಚ್.ಎಂ.ಪಿ.ಕುಮಾರ್, ಜಗದೀಶ್ ಗೌಡ, ಮಂಜುನಾಥ್, ವಸಂತ್, ಮೂರ್ತೆಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಶ್ರೇಯಸ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!