ಬತ್ತಿ ಬರಿದಾದ ಬ್ಯಾಲದಹಳ್ಳಿ ಹಳ್ಳ

ಬತ್ತಿ ಬರಿದಾದ ಬ್ಯಾಲದಹಳ್ಳಿ ಹಳ್ಳ

ಜಿಗಳಿ ಪ್ರಕಾಶ್

ದೇವರಬೆಳಕೆರೆ ಪಿಕಪ್ ಡ್ಯಾಂ ನೀರು ಮತ್ತು ಹಳ್ಳ ಕಾಲುವೆಗಳ ನೀರಿನಿಂದಾಗಿ ಸದಾ ಹರಿಯುತ್ತಿದ್ದ ಬ್ಯಾಲದಹಳ್ಳಿ ಹಳ್ಳ ಈ ಬಾರಿ ಫೆಬ್ರವರಿ ತಿಂಗಳಲ್ಲೇ ಬತ್ತಿ ಬರಿದಾಗಿದ್ದು, ತೋಟಗಳ ರೈತರ ನಿದ್ದೆಗೆಡಿಸಿದೆ.

ಈ ಹಳ್ಳದ ನೀರಿನಿಂದ ದೇವರಬೆಳಕೆರೆ, ಕುಣೆಬೆಳಕೆರೆ, ಕಡ್ಲೇಗೊಂದಿ, ಸಲಗನಹಳ್ಳಿ, ಬ್ಯಾಲದಹಳ್ಳಿ, ಎಕ್ಕೆಗೊಂದಿ, ಭಾನುವಳ್ಳಿ, ರಾಮತೀರ್ಥ, ಬೆಳ್ಳೂಡಿ ಮತ್ತು ಹನಗವಾಡಿ, ಹರಗನಹಳ್ಳಿಯ ಸಾವಿರಾರು ರೈತರು ವೀಳ್ಯೆದೆಲೆ ತೋಟ ಸೇರಿದಂತೆ ವಿವಿಧ ಬಗೆಯ ತೋಟ – ತರಕಾರಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಕಳೆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಭದ್ರಾ ಜಲಾಶಯ ಸೇರಿದಂತೆ ಹಳ್ಳ-ಕೊಳ್ಳಗಳು ಭರ್ತಿ ಆಗಲಿಲ್ಲ. ಇದರಿಂದಾಗಿ ಭದ್ರಾ ಅಚ್ಚುಕಟ್ಟಿನ ರೈತರಿಗೆ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೆಳೆ ಬೆಳೆಯಲು ನೀರು ಇಲ್ಲದಂತಾಯಿತು. ಜೊತೆಗೆ ತೋಟದ ಬೆಳೆಗಳಿಗಾಗಿ ಆಫ್ ಅಂಡ್ ಆನ್ ಪದ್ಧತಿಯಲ್ಲಿ ಹರಿಸುತ್ತಿರುವ ಭದ್ರಾ ನಾಲೆ ನೀರು ಕೂಡಾ ಅಚ್ಚುಕಟ್ಟಿನ ತೋಟದ ಬೆಳೆಗಾರರಿಗೆ ಕನಿಷ್ಠ ರೂಪದಲ್ಲೂ ಸಿಕ್ಕಿಲ್ಲ.

ಏತನ್ಮಧ್ಯೆ, ದೇವರಬೆಳಕೆರೆ ಪಿಕಪ್ ಡ್ಯಾಂಗೆ ಒಳಹರಿವು ಕಡಿಮೆ ಆಗಿರುವ ಕಾರಣ, ನೀರು ಸ್ವಯಂ ಚಾಲಿತ ಗೇಟುಗಳನ್ನು ಹತ್ತಿ ಹರಿಯು ತ್ತಿಲ್ಲ. ಜೊತೆಗೆ ಹಳ್ಳ-ಕಾಲುವೆಗಳಲ್ಲೂ ನೀರಿಲ್ಲದ ಕಾರಣ ಬ್ಯಾಲದಹಳ್ಳಿ ಹಳ್ಳ ಬತ್ತಿ ಬರಿದಾಗಿದೆ.

ರೈತರು ತೋಟಗಳನ್ನು ಉಳಿಸಿಕೊಳ್ಳಲು ಹಳ್ಳದಲ್ಲಿ ಗುಂಡಿಗಳನ್ನು ತೋಡಿ ನೀರು ಬಗೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಇದರ ನಡುವೆ ಶುಕ್ರವಾರ ಕುಣೆಬೆಳಕೆರೆ, ಭಾನುವಳ್ಳಿ ಮತ್ತಿತರೆ ಗ್ರಾಮಗಳ ರೈತರು ಮಲೇಬೆನ್ನೂರು ನೀರಾವರಿ ಕಚೇರಿಗೆ ಆಗಮಿಸಿ, ದೇವರಬೆಳಕೆರೆ ಪಿಕಪ್ ಡ್ಯಾಂ ಗೇಟ್‌ ತೆರೆದು ಬ್ಯಾದಲಹಳ್ಳಿ ಹಳ್ಳಕ್ಕೆ ನೀರು ಹರಿಸುವಂತೆ ಒತ್ತಾಯಿಸಿದ್ದಾರೆ.

ಎಇಇ ಧನಂಜಯ ಅವರು, ದೇವರಬೆಳಕೆರೆ ಡ್ಯಾಂ ಗೇಟ್ ತೆರೆಯುವ ಅಧಿಕಾರ ನನಗಿಲ್ಲ. ಭದ್ರಾ ಅಧೀಕ್ಷಕ ಇಂಜಿನಿಯರ್ ಅವರನ್ನು ಭೇಟಿ ಮಾಡುವಂತೆ ತಿಳಿಸಿದ್ದಾರೆ. ಇನ್ನೊಂದು ವಾರದೊಳಗೆ ಬ್ಯಾಲದಹಳ್ಳಿ ಹಳ್ಳಕ್ಕೆ ನೀರು ಹರಿಸದಿದ್ದರೆ ನಮ್ಮ ತೋಟಗಳು ಒಣಗಿ ಹೋಗುತ್ತವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

error: Content is protected !!