ಮಲೇಬೆನ್ನೂರು, ಫೆ. 23- ಸೌಹಾರ್ದತೆ ಸಾರುವ ಪಟ್ಟಣದ ಪ್ರಸಿದ್ಧ ಹಜರತ್ ಹಬೀಬುಲ್ಲಾ ಷಾ ಖಾದ್ರಿ ಅವರ ಗಂಧ ಮತ್ತು ಉರುಸು ಅಂಗವಾಗಿ ಗುರುವಾರ ರಾತ್ರಿ ದರ್ಗಾ ಆವರಣದಲ್ಲಿ ಹಮ್ಮಿಕೊಂಡಿದ್ದ ಖವ್ವಾಲಿ ಕಾರ್ಯಕ್ರಮವನ್ನು ನೋಡಲು ಜನ ಸಾಗರವೇ ಹರಿದು ಬಂದಿತ್ತು.
ಹರಿಹರ, ದಾವಣಗೆರೆ, ರಾಣೇಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ, ಹಾವೇರಿ, ಹೊನ್ನಾಳಿ, ಚನ್ನಗಿರಿ, ಬಸವಾಪಟ್ಟಣ, ಸಾಸ್ವೆಹಳ್ಳಿ, ಶಿವಮೊಗ್ಗ, ಭದ್ರಾವತಿ ಸೇರಿದಂತೆ ದೂರದ ಊರುಗಳಿಂದ ಜನ ದಾಖಲೆ ಸಂಖ್ಯೆಯಲ್ಲಿ ಮಲೇಬೆನ್ನೂರಿಗೆ ಆಗಮಿಸಿದ್ದರಿಂದ ದರ್ಗಾ ಆವರಣ ತುಂಬಿ ತುಳುಕುತ್ತಿತ್ತು.
ಯುವ ಗಾಯಕ ಉತ್ತರ ಪ್ರದೇಶದ ರಿಯೀಸ್ ಹನೀಫ್ ಅವರ ಖವ್ವಾಲಿ ಜನಮನ ಸೆಳೆಯಿತು. ಈತನ ಹಾಡುಗಳಿಗೆ ಹುಚ್ಚೆದ್ದು ಕುಣಿದ ಯುವಕರು ನೋಟಿನ ಸುರಿಮಳೆ ಸುರಿಸಿ ಖುಷಿಪಟ್ಟರು. ಉತ್ತರ ಪ್ರದೇಶದ ಇನ್ನೋರ್ವ ಗಾಯಕ ಜುನೈದ್ ಸುಲ್ತಾನಿ ಅವರ ಖವ್ವಾಲಿ ಕೂಡ ಆಕರ್ಷಣೀಯವಾಗಿತ್ತು.
ಖವ್ವಾಲಿ ನೋಡಲು ಜನ ತಡರಾತ್ರಿ 1 ಗಂಟೆವರೆಗೂ ಕಾರು, ಆಟೋಗಳಲ್ಲಿ ಆಗಮಿಸುತ್ತಲೇ ಇದ್ದರು. ಇದರಿಂದಾಗಿ ಪಟ್ಟಣದ ಹೆದ್ದಾರಿ ಉದ್ದಕ್ಕೂ ಮತ್ತು ಬಸ್ ನಿಲ್ದಾಣ, ನಿಟ್ಟೂರು ರಸ್ತೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಾವಿರಾರು ವಾಹನಗಳು ನಿಂತಿದ್ದವು.
ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಜಿಲ್ಲಾ ವಕ್ಫ್ ಕಮಿಟಿ ಶಿರಾಜ್ ಅಹ್ಮದ್, ಉರುಸು ಕಮಿಟಿ ಅಧ್ಯಕ್ಷ ಖುರ್ಬಾನ್ ಅಲಿ, ಬಿ. ರಫೀವುಲ್ಲಾ, ಎಂ.ಜಿ. ಫೈಜು, ಖುದ್ದೂಸ್ ಸಾಬ್, ಶಕ್ತಿ ಸಾಮಿಲ್ ಮುನ್ನಾ, ಶೇರ್ ಅಲಿ, ಸಜ್ಜು, ಯುನೂಸ್, ಭೋವಿಕುಮಾರ್, ಪಿ.ಹೆಚ್. ಶಿವಕುಮಾರ್, ಪಿ.ಆರ್. ರಾಜು, ಎ.ಕೆ. ಲೋಕೇಶ್, ಕುಂಬಳೂರು ವಾಸು ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಪಿಎಸ್ಐ ಪ್ರಭು ಕೆಳಗಿನಮನೆ ನೇತೃತ್ವದಲ್ಲಿ ನೂರಾರು ಪೊಲೀಸರು ವಾಹನಗಳ ಹಾಗೂ ಜನರ ನಿಯಂತ್ರಣಕ್ಕೆ ಹರಸಾಹಸಪಟ್ಟರು.