ತಿದ್ದುಪಡಿ ಆದೇಶ ಖಂಡಿಸಿ ಎಬಿವಿಪಿ ಪ್ರತಿಭಟನೆ

ತಿದ್ದುಪಡಿ ಆದೇಶ ಖಂಡಿಸಿ ಎಬಿವಿಪಿ ಪ್ರತಿಭಟನೆ

ದಾವಣಗೆರೆ, ಫೆ. 21- ಎಲ್ಲಾ ಶಾಲೆಗಳಲ್ಲಿ ಎನ್ನುವ ಬದಲು ಕೇವಲ ಸರ್ಕಾರಿ, ಅನುದಾನಿತ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ನಾಡಗೀತೆ ಹಾಡಬೇಕೆಂಬ ತಿದ್ದುಪಡಿ ಆದೇಶವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೀವ್ರವಾಗಿ ಖಂಡಿಸಿ, ಎಬಿವಿಪಿ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

 ಕುವೆಂಪು ವಿರಚಿತ ನಾಡಗೀತೆ `ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’ ಈ ಗೀತೆಯನ್ನು ಎಲ್ಲಾ ಅಧಿಕೃತ ಶಾಲೆಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ  ದೈನಂದಿನ ಚಟುವಟಿಕೆಗಳು ಪ್ರಾರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇತ್ತೀಚಿನ ಸುತ್ತೋಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಎನ್ನುವ ಪದವನ್ನು ಕೈ ಬಿಟ್ಟಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಿಗರು ಹುಟ್ಟು ಸ್ವಾಭಿಮಾನಿಗಳು ಎನ್ನುವುದನ್ನು ಸರ್ಕಾರವು ಮರೆತಂತಿದೆ. ಈ ತಿದ್ದುಪಡಿಯ ಸುತ್ತೋಲೆಯಿಂದಾಗಿ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನ ಅಂತಃಕರಣ ಕಲಕಿದಂ ತಾಗಿದೆ. ನಮ್ಮ ನಾಡಿನ ಮಕ್ಕಳಲ್ಲಿ ತಾಯ್ನಾಡಿನ ಅಭಿಮಾನ ಜಾಗರೂಕರಿಸಲು ಇದ್ದಂತಹ ಏಕೈಕ ಮಾರ್ಗವನ್ನು ಸರ್ಕಾರದ ದಡ್ಡತನದ ನಡೆಯಿಂದ ಕಳೆದುಕೊಂಡಂತಾಗಿದೆ ಎಂದರು.

ದೀಕ್ಷೆಯ ತೊಡು ಇಂದೇ ಕಂಕಣ ಕಟ್ಟಿಂದೆ ಎನ್ನುವ ರಾಷ್ಟ್ರಕವಿ ಕುವೆಂಪುರವರ ಮಾತಿನಂತೆ ಕನ್ನಡ ನಾಡಗೀತೆಯನ್ನು ಪ್ರತಿ ಶಾಲೆಗಳಲ್ಲೂ, ಪ್ರತಿ ಮಗುವಿನ ಹೃನ್ಮನಗಳಲ್ಲಿಯೂ ಅನುರುಣಿಸುವಂತೆ, ತಾಯಿ ಭಾರತೀಯ ಹೆಮ್ಮೆಯ ತನುಜಾತೆ ಕರ್ನಾಟಕ ಮಾತೆ ಎಂದು ಸಾರಿ ಹಾಡುವಂತೆ ನಾಡಿನ ಪ್ರತಿಯೊಬ್ಬ ಪ್ರಜೆಗೂ ವಿದ್ಯಾರ್ಥಿ ಪರಿಷತ್ ಕರೆ ನೀಡುತ್ತದೆ ಎಂದು ಹೇಳಿದರು.

 ಕನ್ನಡ, ಸಾಹಿತ್ಯ, ಸಂಸ್ಕೃತಿ ವಿರೋಧಿ ಪರಂಪರೆಯ ನಾಡ ದ್ರೋಹಿ ಸರ್ಕಾರವನ್ನು ಹಾಗೂ ಸರ್ಕಾರದ ಈ ಸುತ್ತೋಲೆಯನ್ನು ಕಿತ್ತೆಸೆಯ ಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ವಿಭಾಗದ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಕೊಳ್ಳೇರ, ನಗರ ಸಹ ಕಾರ್ಯದರ್ಶಿ ಮೋಹಿತ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರತನ್, ತಿಪ್ಪೇಸ್ವಾಮಿ, ಕರಿಬಸವ, ಉಮೇಶ್ ಇನ್ನಿತರರು ಉಪಸ್ಥಿತರಿದ್ದರು.

error: Content is protected !!