ಕುವೆಂಪು ಘೋಷವಾಕ್ಯ ಬದಲಿಸುವ ರಾಜ್ಯ ಸರ್ಕಾರದ ನಡೆ ವಿರುದ್ಧ ಎಬಿವಿಪಿ ಪ್ರತಿಭಟನೆ

ಕುವೆಂಪು ಘೋಷವಾಕ್ಯ ಬದಲಿಸುವ ರಾಜ್ಯ ಸರ್ಕಾರದ ನಡೆ ವಿರುದ್ಧ ಎಬಿವಿಪಿ ಪ್ರತಿಭಟನೆ

ದಾವಣಗೆರೆ, ಫೆ. 20- `ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎಂಬ ಕುವೆಂಪು ಅವರ ಅರ್ಥಪೂರ್ಣ ವಾಕ್ಯವನ್ನು`ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ, ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಪವಿಭಾಗಾ ಧಿಕಾರಿ ಎನ್. ದುರ್ಗಾಶ್ರೀ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಸರ್ಕಾರ ರಾಜ್ಯದ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕುವೆಂಪು ಅವರ ಸಾಲುಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು. ಕನ್ನಡದ ಮಹಾನ್ ದಾರ್ಶನಿಕರು, ಕವಿಯ ಆಶಯಗಳನ್ನು ಮೀರಿ ನಿಲ್ಲುವ ದಾಷ್ಟ್ಯತನವನ್ನು ರಾಜ್ಯ ಸರ್ಕಾರ ತೋರಬಾರದು ಎಂದು ಕಿಡಿಕಾರಿದರು.

ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿರುವ ಸರಸ್ವತಿ, ಗಣಪತಿ ಮೊದಲಾದ ಧಾರ್ಮಿಕ ಪೂಜೆಗಳನ್ನು ಮಾಡುವುದನ್ನು ನಿಷೇಧ ಮಾಡಿ ಗೊಂದಲ ಸೃಷ್ಟಿ ಮಾಡಿತ್ತು. ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಆ ಆದೇಶವನ್ನು ಸರ್ಕಾರ ಹಿಂತೆಗೆದುಕೊಂಡಿತ್ತು. ಇದೀಗ ಸರ್ಕಾರ ಮತ್ತೆ ಕುವೆಂಪು ಅವರ `ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬ ಘೋಷಣೆಯನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾಯಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿಯ ತರ್ಕ ಶೂನ್ಯ ನಡೆಗಳಿಂದ ಸರ್ಕಾರವು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿ ರುವುದು ಭಾಸವಾಗುತ್ತಿದೆ. ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂದರೆ ಜ್ಞಾನ ದೇಗುಲವನ್ನೇ ಪ್ರಶ್ನಿಸಬೇಕೇ? ಜ್ಞಾನವನ್ನು ಪ್ರಶ್ನಿಸಬೇಕೇ? ಅಥವಾ ಜ್ಞಾನ ದೇಗುಲದಂಗಳದಲ್ಲಿ ಶ್ರದ್ಧೆಯೊಂದಿಗೆ ವಿನಯ ಪೂರ್ವಕವಾಗಿ ಜ್ಞಾನ ಸಂಪಾದಿಸಿ ಮೌಲ್ಯಯುತವಾಗಿ ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳುಬೇಕೆ? ಹೀಗೆ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಲ್ಲಿನ ವ್ಯಕ್ತಿತ್ವ, ವಿನಯತೆ, ವಿನಮ್ರತೆ, ವಿದ್ವತ್ ಪೂರ್ಣತೆಯಿಂದ ಕೂಡಿರಬೇಕೇ ವಿನಹ: ಗೂಂಡಾ ಪ್ರವೃತ್ತಿಯಿಂದಲ್ಲ. ಹಾಗೊಂದು ವೇಳೆ ಧೈರ್ಯವಾಗಿ ಪ್ರಶ್ನಿಸು ಎನ್ನುವ ಸಾಲು ಬೇಕಿದ್ದರೆ ಭ್ರಷ್ಟ ಸಚಿವರ, ಅಧಿಕಾರಿ ವರ್ಗದವರ ಸರ್ಕಾರಿ ಕಚೇರಿಗಳಲ್ಲಿ ಹಾಕಿಸಿಕೊಳ್ಳಲಿ ಎಂದು ಗುಡುಗಿದರು.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎನ್ನುವ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಶಯದಂತೆ ಸರ್ಕಾರ ತನ್ನ ನಡೆಯನ್ನು ತಿದ್ದಿಕೊಳ್ಳಬೇಕೆಂದು ಹಾಗೂ ವಿಶ್ವಮಾನವ ಕುವೆಂಪುರವರ ಸಾಲುಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ವಿಭಾಗದ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಕೊಳ್ಳೇರ, ನಗರ ಸಹ ಕಾರ್ಯದರ್ಶಿ ಮೋಹಿತ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರತನ್, ತಿಪ್ಪೇಸ್ವಾಮಿ, ಕರಿಬಸವ, ಉಮೇಶ್ ಇನ್ನಿತರರು ಉಪಸ್ಥಿತರಿದ್ದರು.

error: Content is protected !!