ಸಮೃದ್ಧ ಕನ್ನಡ ನಾಡು ಸರಿಸಾಟಿ ಇಲ್ಲದ ಸಂಪತ್ತನ್ನು ಹೊಂದಿದೆ

ಸಮೃದ್ಧ ಕನ್ನಡ ನಾಡು ಸರಿಸಾಟಿ ಇಲ್ಲದ ಸಂಪತ್ತನ್ನು ಹೊಂದಿದೆ

ಹರಪನಹಳ್ಳಿ ತೆಗ್ಗಿನ ಮಠದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರ ಶೇಖರಯ್ಯ

ಹರಪನಹಳ್ಳಿ, ಫೆ. 18 – ಸಂಪದ್ಭರಿತವಾದ ಕರುನಾಡು ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರದಲ್ಲಿ ಉನ್ನತ ಪರಂಪರೆಯನ್ನು ಹೊಂದಿದೆ. ಸಮೃದ್ಧ ಕನ್ನಡನಾಡು ಸರಿಸಾಟಿಯಿಲ್ಲದಷ್ಟು ಸಂಪತ್ಭರಿತ ವಾಗಿದೆ ಎಂದು  ತೆಗ್ಗಿನ ಮಠದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರ ಶೇಖರಯ್ಯ ಹೇಳಿದರು.

ತಾಲ್ಲೂಕಿನ ಅನಂತನಹಳ್ಳಿ ಬಳಿ ಇರುವ ಆದರ್ಶ ವಿದ್ಯಾಲಯದಲ್ಲಿ  ಶ್ರೀ ಚೋರನೂರು ಹಿರೇಮಠದ ಚೆನ್ನಬಸಯ್ಯ ಮತ್ತು ದೇವಿರಮ್ಮ ದತ್ತಿ, ಅಧ್ಯಕ್ಷರು ತೆಗ್ಗಿನ ಮಠ ಆರ್ಟ್ಸ್ ಎಜುಕೇಶನ್ ಸೊಸೈಟಿ ದತ್ತಿ, ಟಿ.ಎಂ. ಸೋಮಲಿಂಗಯ್ಯ ದತ್ತಿ, ಎಂ.ಪಿ.ಎಂ. ಶಾಂತಮ್ಮ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಹಾಗೂ ಎಲ್ಲ ಕನ್ನಡಪರ ಸಂಸ್ಥೆಗಳಿಗೆ ಮಾತೃ ಸಂಸ್ಥೆಯಾಗಿ, ಪ್ರಾರಂಭದಿಂದಲೂ ಕನ್ನಡ-ಕನ್ನಡಿಗ-ಕರ್ನಾಟಕದ ಸೇವೆಗೆ ಕನ್ನಡ ಸಾಹಿತ್ಯ ಪರಿಷತ್ತು  ಕಂಕಣ ಬದ್ಧವಾಗಿದೆ ಎಂದರು.

ಸಿ.ಪಿ.ಐ. ಸಾಬಯ್ಯ ನಾಯಕ  ಮಾತನಾಡಿ, ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ ಅಥವಾ ನಿಂದಿಸುವ ಅಥವಾ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಖಂಡನೀಯವಾಗಿದ್ದು, ಭಾರತವು ಮಕ್ಕಳನ್ನು ರಕ್ಷಿಸಲು ವ್ಯಾಪಕ ಶ್ರೇಣಿಯ ಕಾನೂನುಗಳನ್ನು ಹೊಂದಿದೆ ಎಂದರು.

ತೆಲಿಗಿ ಸಾಹಿತಿ ಕೆ.ಎಸ್. ವೀರಭದ್ರಪ್ಪ  ಅವರು ರಂಗಭೂಮಿ ಕಲೆಗೆ ಪ್ರೋತ್ಸಾಹ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಗ್ರಾಮೀಣ ಪ್ರದೇಶದ ಜನರಿಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ತಿಳಿಸಲು  ರಂಗಭೂಮಿ ಪರಿಣಾಮಕಾರಿ ಮಾಧ್ಯಮವಾಗಿ ಬಳಸಲ್ಪಟ್ಟಿದೆ. ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಇದು ಪರಿಪೂರ್ಣ ಮಾಧ್ಯಮವಾಗಿ ಬಳಸಲ್ಪಟ್ಟಿದೆ. ಕನ್ನಡದಲ್ಲಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳಾಗಿ ವಿಂಗಡಿಸಬಹುದು. ರಂಗಭೂಮಿಯ ರಂಗ ಶಿಕ್ಷಣವು ಮಕ್ಕಳಲ್ಲಿ ಜಾತಿ, ಧರ್ಮವನ್ನೂ ಮೀರಿದ ಸಂಸ್ಕೃತಿಯನ್ನು ಕಲಿಸುತ್ತದೆ. ಒಟ್ಟಿಗೆ ಬದುಕುವುದು ಹೇಗೆ ಎಂಬುದನ್ನು ಕಲಿಸಿಕೊಡುತ್ತದೆ. ನೈತಿಕ ಮೌಲ್ಯ ಕುಸಿಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿರುವ ಈ ದಿನಗಳಲ್ಲಿ ರಂಗಭೂಮಿ ಮಕ್ಕಳಲ್ಲಿ ನೈತಿಕ ಮೌಲ್ಯವನ್ನೂ ಕಲಿಸಿಕೊಡುತ್ತವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿ, ಜಾನಪದ ಕನ್ನಡ-ಕನ್ನಡಿಗ-ಕರ್ನಾಟಕ ಹಾಗೂ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯೊಂದಿಗೆ ಕನ್ನಡ ಭಾಷೆ, ನೆಲ-ಜಲದ ಅಸ್ಮಿತೆಗೆ ತೊಂದರೆ ಬಂದಾಗ ಸರ್ಕಾರ ಹಾಗೂ ಅಪಾರ ಕನ್ನಡಿಗರ ಒತ್ತಾಸೆಯೊಂದಿಗೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸದಾ ನಿಮ್ಮೊಂದಿಗೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಎಚ್.ಕೆ. ಚಂದ್ರಪ್ಪ.  ಎಸ್.ಡಿ.ಎಂ.ಸಿ ಅದ್ಯಕ್ಷ ಎಂ. ಬಸವನಗೌಡ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಗೌರವ ಕಾರ್ಯದರ್ಶಿ ಜಿ. ಮಹಾದೇವಪ್ಪ, ಗೌರವ ಕೋಶಾಧಿಕಾರಿ ಕೆ. ರಾಘವೇಂದ್ರ ಶೆಟ್ಟಿ, ಶಿಕ್ಷಕರಾದ ಮಲ್ಲಮ್ಮ, ಪರ್ವಿನ್, ಸಂತೋಷ್,  ಸೂರ್ಯನಾಯ್ಕ, ವೃಷಭೇಂದ್ರಪ್ಪ ಸೇರಿದಂತೆ ಇತರರು ಇದ್ದರು.

error: Content is protected !!