ಚನ್ನಗಿರಿ ತಾಲ್ಲೂಕು ಕಸಾಪ ಕಾರ್ಯಕ್ರಮದಲ್ಲಿ ಎಂ.ಯು. ಚನ್ನಬಸಪ್ಪ
ಚನ್ನಗಿರಿ, ಫೆ. 15 – ಹನ್ನೆರಡನೇ ಶತಮಾನದಲ್ಲಿಯೇ ಕಲ್ಯಾಣ ರಾಜ್ಯದ ಕನಸನ್ನು ಕಂಡು, ಅನುಭವ ಮಂಟಪವನ್ನು ಸ್ಥಾಪಿಸಿ, ಶೋಷಣೆಗೆ ಒಳಪಟ್ಟ ಸರ್ವ ಸಮುದಾಯಗಳಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿ ಸಮ ಸಮಾಜದ ಕ್ರಾಂತಿ ಪುರುಷ ಎನಿಸಿಕೊಂಡವರು ಬಸವಣ್ಣ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಯು.ಚನ್ನಬಸಪ್ಪ ತಿಳಿಸಿದರು.
ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ `ಸಾಂಸ್ಕೃತಿಕ ನಾಯಕನಾಗಿ ಬಸವಣ್ಣ’ ಒಂದು ವಿಚಾರ ಗೋಷ್ಠಿ ಹಾಗೂ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ದಬ್ಬಾ ಳಿಕೆ – ದೌರ್ಜನ್ಯಗಳಿಂದ ಧಮನಿತ ಸಮುದಾಯಗಳನ್ನು ಮುಕ್ತಗೊಳಿಸಲು ಹೋರಾಟ ಮಾಡಿ ಹಾಗೂ ಮೂಢ ನಂಬಿಕೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಸಾಮಾಜಿಕ ಅಸಮಾ ನತೆಯಂತಹ ಅನಿಷ್ಟ ಆಚರಣೆಗಳನ್ನು ತೊಡೆದುಹಾಕಿ ಸಮಾನತೆಯನ್ನು ಸಾರುವುದರ ಜೊತೆಗೆ ದೇವರನ್ನು ಕಾಣಲು ಮಧ್ಯವರ್ತಿಗಳನ್ನು ಸಂಪರ್ಕಿಸಬೇಕಾಗು ವಂತಹ ಕಾಲದಲ್ಲಿ ನಿಷ್ಠೆಯ ಕಾಯಕವನ್ನು ಮಾಡು ವುದರ ಮೂಲಕ ಮನದಲ್ಲಿಯೇ ದೇವರನ್ನು ಕಾಣಬ ಹುದು ಎಂದು ತೋರಿಸಿಕೊಟ್ಟವರು ಬಸವಣ್ಣ ಎಂದರು.
ಚನ್ನಗಿರಿ ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಮಾತನಾಡಿ, ಕಾಯಕದಿಂದ ಬರುವ ಸಂಪತ್ತನ್ನು ತನ ಗಾಗಿ ಬಳಸುವುದರ ಜೊತೆಗೆ, ಸಮಾಜಕ್ಕೂ ಮೀಸಲಿರಿ ಸಬೇಕು ಎನ್ನುವಂತಹ ದಾಸೋಹದ ಸಿದ್ಧಾಂತವನ್ನು ತಿಳಿಸಿಕೊಟ್ಟು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳ ಫಲ ತಲುಪುವಂತೆ ಮಾಡಬೇಕು ಎಂಬ ಭದ್ರಾ ಬುನಾದಿಯನ್ನು ಹಾಕಿಕೊಟ್ಟವರು ಬಸವಣ್ಣ ನವರು. ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ನನ್ನಾಗಿ ಬಸವಣ್ಣನವರನ್ನು ಘೋಷಿಸಿರುವುದು ಕನ್ನಡದ ಸಾರಸ್ವತ ಲೋಕಕ್ಕೆ ಸಂತಸವನ್ನು ನೀಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಜಿ.ಚಿನ್ನಸ್ವಾಮಿ ವಹಿಸಿದ್ದರು. ಕಸಾಪ ಕಾರ್ಯದರ್ಶಿ ಎಂ.ಎಸ್.ಬಸವನಗೌಡ, ಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನ ಉಪನ್ಯಾಸಕರಾದ ನಾಹೀದ ಅಂಜುಂ, ಅಭಿಲಾಷ, ಅರ್ಪಿತ, ಪೂಜಾ ಮತ್ತಿತರರು ಇದ್ದರು.