ಹರಿಹರದಲ್ಲಿ ಶೀಘ್ರ ಜನಸ್ಪಂದನ ಸಭೆ

ಹರಿಹರದಲ್ಲಿ ಶೀಘ್ರ ಜನಸ್ಪಂದನ ಸಭೆ

ಗುತ್ತೂರಿನಲ್ಲಿ ಇ-ಸೊತ್ತು ಆಂದೋಲನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ 

ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ

ಹರಿಹರ, ಫೆ,13- ಸಾರ್ವಜನಿಕರ ಅಹವಾಲು ಸ್ವೀಕರಿಸಲು ನಗರದಲ್ಲಿ ಶೀಘ್ರದಲ್ಲೇ ಜನಸ್ಪಂದನ ಸಭೆಯನ್ನು ಆಯೋಜಿಸಲಾಗುತ್ತದೆ ಎಂದು  ಜಿಲ್ಲಾಧಿಕಾರಿ ಡಾ ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

ನಗರದ ಹೊರವಲಯದ ಗುತ್ತೂರು ಗ್ರಾಮದಲ್ಲಿ ಇ- ಸ್ವತ್ತು ಆಂದೋಲನಕ್ಕೆ ಚಾಲನೆ ನೀಡಿ, ತದನಂತರ ನಗರದ ನೀರು ಶುದ್ಧೀಕರಣ ಘಟಕಕ್ಕೆ ಮತ್ತು ನಗರಸಭೆ ಮುಂಭಾಗದಲ್ಲಿ ನೂತನ ನಗರಸಭೆ ಕಟ್ಟಡದ ಕಾಮಗಾರಿ ವೀಕ್ಷಣೆ ಮಾಡಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. 

ನಗರ ಪ್ರದೇಶಗಳಲ್ಲಿ ಮತ್ತು ಪಟ್ಟಣ ಪಂಚಾಯತಿ, ಮಹಾನಗರಪಾಲಿಕೆ ಗಳಲ್ಲಿ ಇ-ಸ್ವತ್ತು ದಾಖಲೆಗಳನ್ನು ಪಡೆಯುವುದಕ್ಕೆ ಬಹಳ ಕಷ್ಟವಾಗುತ್ತಿತ್ತು. ಹಾಗಾಗಿ ಜನರ ಮನೆಬಾಗಿಲಿಗೆ ಈ-ಸ್ವತ್ತು ತಲುಪಿಸಬೇಕು ಮತ್ತು ಆಡಳಿತವನ್ನು ಜನಪರವಾಗಿ ಹಾಗೂ ಜನಸ್ನೇಹಿಯಾಗಿ ಮಾಡಬೇಕು ಎಂಬ ದೃಷ್ಟಿಯಿಂದ ನಗರದ ಎಲ್ಲಾ ವಾರ್ಡ್ ಗಳಲ್ಲಿ ಈ ಸ್ವತ್ತು ಆಂದೋಲನದ ಮೂಲಕ ಎರಡು ಗಂಟೆಯ ಸಮಯದಲ್ಲಿ  ವಿತರಣೆ ಮಾಡಲಾಗುತ್ತದೆ. ಅನೇಕ ವರ್ಷಗಳಿಂದ ಫಾರಂ 3 ಕೊಡಬೇಕಾದರೆ ಎರಡು ಮತ್ತು ಮೂರು ವರ್ಷ ಆಗಿದ್ದವರು ಯಾರು ಯಾರಿಗೆ ಹಕ್ಕು ಪತ್ರ ಮಾತ್ರ ಸಿಕ್ಕಿದ್ದವೋ ಅವರಿಗೆ ಇ- ಸ್ವತ್ತು ಮಾಡಿಸಿಕೊಳ್ಳಲು ಆಗಿರಲಿಲ್ಲ, ಅಂತವರು ಈಗ 2 ಗಂಟೆ ಸಮಯದಲ್ಲಿ ಇ-ಸ್ವತ್ತು ಖಾತೆ ದಾಖಲೆಗಳನ್ನು ಪಡೆಯಬಹುದಾಗಿದೆ. ಇಂದು  ಸುಮಾರು 50 ಜನರಿಗೆ ಇ- ಸ್ವತ್ತು ದಾಖಲೆಗಳನ್ನು ನೀಡಲಾಯಿತು.   ಈ ಆಂದೋಲನ ಮಾರ್ಚ್‌ 15ರವರೆಗೆ ಇರುತ್ತದೆ  ಸಾರ್ವಜನಿಕರು ಸದುಪಯೋಗ ಪಡಿದುಕೊಳ್ಳಲು ಹೇಳಿದರು.

ಏಪ್ರಿಲ್ ತಿಂಗಳವರೆಗೆ ನಗರದ ಜನತೆಗೆ ನೀರಿನ ಸಮಸ್ಯೆಗಳು ಬರದಂತೆ ಎಚ್ಚರ ವಹಿಸಲು ನದಿಯಲ್ಲಿ ನೀರಿನ ಪ್ರಮಾಣ ಎಷ್ಟಿದೆ, ನೀರು ಶುದ್ಧೀಕರಣ ಕೇಂದ್ರದಲ್ಲಿ ಯಾವ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಬೆಳಗ್ಗೆಯಿಂದ ಪರಿಶೀಲನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು ಬರದಂತೆ ತಡೆಯಲು ಮತ್ತು ಏನೇ ಸಮಸ್ಯೆಗಳು ಬಂದರೂ   ಅದನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರಸಭೆ ನೂತನ ಕಟ್ಟಡದ ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳು ವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.  

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್, ತಹಶೀಲ್ದಾರ್ ಗುರುಬಸವರಾಜ್, ನಗರ ಯೋಜನಾಧಿಕಾರಿ ಮಾಲತೇಶ್, ಜಲಸಿರಿ ಇಲಾಖೆಯ ಎಇಇ ನವೀನ್ ಕುಮಾರ್, ಚಿಂತಾಮಣಿ ಗಣೇಶ ದೇವಸ್ಥಾನದ ಅಧ್ಯಕ್ಷ ಸತ್ಯನಾರಾಯಣ, ಎಇಇ ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ಅಬ್ದುಲ್ ಅಲಿಂ, ಕಾಂಗ್ರೆಸ್ ಮುಖಂಡ ದಾದಾಪೀರ್ ಭಾನುವಳ್ಳಿ, ಇಂಜಿನಿಯರ್ ರೆಹಮಾನ್, ಮಂಜುಳಾ, ಮಂಜುನಾಥ್ , ಡಿಸಿ ಆಪ್ತ ಸಹಾಯಕ ಶ್ರೀನಿವಾಸ್, ಪೊಲೀಸ್ ವಾಗೀಶ್ ಇತರರು ಹಾಜರಿದ್ದರು.

error: Content is protected !!