ಹರಪನಹಳ್ಳಿ, ಫೆ. 12- ರಾಷ್ಟ್ರದ ಹಿತಾಸಕ್ತಿ ಸಾಧಿಸಿ ಅಭಿವೃದ್ಧಿ ಹೊಂದಲು ಜನರು ನಾವೆಲ್ಲಾ ಒಂದು ಎಂಬ ಭಾವನೆ ಬೆಳೆಸಲು ಭಾವೈಕ್ಯತೆ ಅಗತ್ಯ ಎಂದು ಪುರಸಭೆ ಮಾಜಿ ಸದಸ್ಯ ಎಂ. ಜಾಫರ್ ಸಾಹೇಬ್ ಹೇಳಿದರು.
ಪಟ್ಟಣದ ವರಕೈ ಅಂಜನೇಯ ಸ್ವಾಮಿ ದೇವಸ್ಥಾನದ ಸಮಿತಿಯವರು ಅಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಅನೇಕ ಜನಾಂಗಗಳು ನೆಲೆಸಿರುವ ಭಾರತವು ನಾನಾ ಬಗೆಯ ಜಾತಿ, ಮತ, ಧರ್ಮಗಳನ್ನು ಹೊಂದಿದೆ. ಆದರೆ ವೇಷ, ಭಾಷೆ, ಬಣ್ಣ ಬೇರೇಯಾದರೂ ಎಲ್ಲರೂ ಭಾರತೀಯರೇ, ಪ್ರತಿಯೊಬ್ಬರು ಉಪಯೋಗಿಸುವ ನೈಸರ್ಗಿಕ ಸಂಪನ್ಮೂಗಳು ಒಂದೇ ಆಗಿರುವಾಗ ನಾವೆಲ್ಲರೂ ಒಂದು ಎಂಬ ಮನೋಭಾವ ಬಂದಾಗ ಮಾತ್ರ ರಾಷ್ಟ್ರೀಯ ಭಾವೈಕ್ಯತೆ ಸಾಧ್ಯ ಎಂದರು.
ದೇವಸ್ಥಾನದ ಸಮಿತಿಯವರ ಬಹುದಿನಗಳ ಕೋರಿಕೆಯಂತೆ ಇಲ್ಲಿನ ಒಂದು ಎಕರೆ ಜಮೀನಿನಲ್ಲಿ 40/60 ಜಮೀನನ್ನು ದೇವಸ್ಥಾನದ ಉಪ ಯೋಗಕ್ಕೆ ನೀಡಿದ್ದೇನೆ ಎಂದು ಹೇಳಿದರು.
ಕೆ. ತಿರುಮಲ ಮಾತನಾಡಿ, ಜಾತಿ ಧರ್ಮದ ಹೆಸರಿನ ಗುದ್ದಾಟದಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ಎಂ. ಜಾಫರ್ ಸಾಹೇಬ್ ಅವರು ದೇವಸ್ಥಾನಕ್ಕೆ ಜಮೀನು ದಾನವಾಗಿ ನೀಡಿರುವುದು ಸಂತೋಷದ ವಿಷಯ ಎಂದರು.
ಈ ಸಂದರ್ಭದಲ್ಲಿ ವರಕೈ ಅಂಜನೇಯ ಸ್ವಾಮಿ ಸಮಿತಿ ಅಧ್ಯಕ್ಷ ಹಳೇಬ್ಯಾಡರ ಪರಸಪ್ಪ, ಆಲೂರು ಶ್ರೀನಿವಾಸ, ಡಿ. ಊರಪ್ಪ, ಚನ್ನಪ್ಪ, ಕೆ. ಸೋಮಶೇಖರ, ಯಲ್ಲಜ್ಜಿ ಗೋಣೆಪ್ಪ, ಗಿಡ್ಡಳ್ಳಿ ಅಂಜಿನಪ್ಪ, ವೀರಭದ್ರಪ್ಪ, ಚಂದ್ರಪ್ಪ, ಕೂಲಹಳ್ಳಿ ಮಂಜುನಾಥ, ಆಟೋ ಜಗನ್ನಾಥ, ಭರ್ಮಪ್ಪ ಇತರರು ಉಪಸ್ಥಿತರಿದ್ದರು.