ಹರಿಹರ, ಫೆ,9- ನಗರದ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕಡಿಮೆ ಆಗಿದ್ದರಿಂದ ನಗರದಲ್ಲಿ ನಿನ್ನೆಯಿಂದ ನೀರು ಸರಬ ರಾಜಿನಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಈ ವೇಳೆ ಜಲಸಿರಿ ಇಲಾಖೆಯ ಎಇಇ ನವೀನ್ ಕುಮಾರ್ ಮಾತನಾಡಿ, ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ, ಕವಲೆತ್ತು ಬಳಿ ಇರುವ 27 ಕೆರೆ ನೀರು ಸಂಗ್ರಹ ಕೇಂದ್ರದ ನೀರನ್ನು ಬಳಸಿಕೊಂಡು ಹಲವು ದಿನಗಳಿಂದ ನಗರದಲ್ಲಿ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ನಿನ್ನೆ ಅಲ್ಲಿಂದಲೂ ನೀರು ಎತ್ತುವುದಕ್ಕೆ ಆಗದಷ್ಟು ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ನಿನ್ನೆ ಸಂಜೆಯಿಂದ ನಗರದ ಜನತೆಗೆ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಯಿತು ಎಂದು ತಿಳಿಸಿದರು.
ಇವತ್ತು ಜಾಕ್‌ವೆಲ್ ಹತ್ತಿರ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಸಿ ಆ ಮೂಲಕ ನೀರಿನ ಸಂಗ್ರಹಕ್ಕೆ ಮುಂದಾಗಿದ್ದು, ಇದರಿಂದಾಗಿ ನಗರದ ಜನತೆಗೆ ಕನಿಷ್ಠ ದಿನಕ್ಕೆ ಅರ್ಧ ಗಂಟೆಯವರೆಗೆ ನೀರು ಸರಬರಾಜು ಮಾಡುವುದಕ್ಕೆ ಅವಕಾಶ ಆಗುತ್ತದೆ ಎಂದರು.
ಇದೇ ದಿನಾಂಕ 5 ರಂದು ಡ್ಯಾಮ್ ನಿಂದ ಬಿಟ್ಟಿರುವ ನೀರು ಇನ್ನೂ ರಾಜನಹಳ್ಳಿ ಭಾಗಕ್ಕೆ ಬಂದಿದೆ. ಹರಿಹರ ನಗರಕ್ಕೆ ನಾಳೆ ಬರುವ ಸಾಧ್ಯತೆ ಇದ್ದು, ಬಂದ ತಕ್ಷಣವೇ ನಗರದ ಜನತೆಗೆ ಪೂರ್ಣ ಪ್ರಮಾಣದಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.