ಹರಪನಹಳ್ಳಿ: ಸಮರ್ಪಕ ವಿದ್ಯುತ್‌ಗಾಗಿ ರೈತರ ಪ್ರತಿಭಟನೆ

ಹರಪನಹಳ್ಳಿ: ಸಮರ್ಪಕ ವಿದ್ಯುತ್‌ಗಾಗಿ ರೈತರ ಪ್ರತಿಭಟನೆ

ಹರಪನಹಳ್ಳಿ, ಫೆ.6- ತಾಲ್ಲೂಕಿನ ಹೊಸಕೋಟೆ ಭಾಗದಲ್ಲಿ ವಿದ್ಯುತ್ ವೋಲ್ಟೇಜ್ ಕಡಿಮೆ ಇರುವ ಕಾರಣ ಎರಡು ವರ್ಷಗಳಿಂದ ಇಲ್ಲಿನ ರೈತರು ನಷ್ಟ ಹಾಗೂ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಭಾಗದ ಪಂಪ್ ಸೆಟ್ ಗಳಿಗೆ ಎರಡು ಹಂತಗಳಲ್ಲಿ ವಿದ್ಯುತ್ ಪ್ರಸರಣ ಮಾಡಬೇಕು ಎಂದು ಒತ್ತಾಯಿಸಿ ರೈತರು ದಿಢೀರ್ ಪ್ರತಿಭಟನೆ ನಡೆಸಿದರು

ರೈತ ಮುಖಂಡ ಎಸ್. ಜಾತಪ್ಪ ಮಾತನಾಡಿ ಈ ವರ್ಷ ಬರಗಾಲ ಬಂದಿರುವುದರಿಂದ ಈ ಭಾಗದ ಹಳ್ಳಿಗಳಲ್ಲಿ ರೈತರ ಪಂಪ್ ಸೆಟ್ ಗಳಿಗೆ ಒಂದೇ ಹಂತದಲ್ಲಿ ವಿದ್ಯುತ್ ನೀಡುತ್ತಿರುವುದು ಮತ್ತು ವೋಲ್ಟೇಜ್ ಕಡಿಮೆ ಇರುವುದರಿಂದ ರೈತರಿಗೆ, ದನಕರುಗಳಿಗೆ ನೀರು ಹಾಗೂ ಮೇವಿನ ಕೊರತೆಯಾಗಿದೆ. ಎರಡು ವರ್ಷಗಳಿಂದ ಅರಸಿಕೆರೆಯಲ್ಲಿ ಹೊಸ ವಿದ್ಯುತ್ ಪ್ರಸರಣ ಘಟಕ ಪ್ರಾರಂಭವಾಗುತ್ತದೆ ಎಂದು ಅಧಿಕಾರಿಗಳು ಹುಸಿ ಭರವಸೆ ಹೇಳಿಕೊಂಡು ಬರುತ್ತಿದ್ದಾರೆ.

ಚುನಾಯಿತ ಪ್ರತಿನಿಧಿಗಳು ನಮ್ಮ ಸಮಸ್ಯೆಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ, ಎಷ್ಟೋ ಬಾರಿ ಅಧಿಕಾರಿಗಳಿಗೆ ಮನವಿ ಹಾಗೂ ಪ್ರತಿಭಟನೆ ಮಾಡಿದರೂ ಸಹ ಹೊಸ ವಿದ್ಯುತ್ ಪ್ರಸರಣ ಘಟಕ ಪ್ರಾರಂಭವಾಗಿಲ್ಲ. 

ಈ ನಿಟ್ಟಿನಲ್ಲಿ ರೈತರ ಬೆನ್ನೆಲುಬು ಮುರಿದಂತಾಗಿದೆ, ಕೂಡಲೇ ಈ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಪುಣಭಘಟ್ಟ ವಿದ್ಯುತ್ ಪ್ರಸರಣ ಘಟಕದ ವ್ಯವಸ್ಥಾಪಕರಾದ ಅಂಜಲಿ ಯವರಿಗೆ ಹಾಗೂ ತಾಲ್ಲೂಕು ವಿದ್ಯುತ್ ಪ್ರಸರಣ ಕೇಂದ್ರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್. ಜಾತಪ್ಪ, ಆನಂದಪ್ಪ, ಹೆಚ್. ಹನುಮಂತಪ್ಪ, ಗುರುಮೂರ್ತಿ, ಹೆಚ್. ಭರಮನಗೌಡ, ಹೆಚ್. ಎಸ್. ಮಹಾಂತೇಶಪ್ಪ, ಪೂಜಾರ್ ಸುರೇಶ್, ಹೆಚ್. ಕರಿಬಸಪ್ಪ, ಶಂಕರಪ್ಪ, ಶಿವಕುಮಾರ್, ನಾಗರಾಜ್, ಶಾಂತಕುಮಾರ್, ಹಾಲೇಶ್ ಮುಂತಾದ ರೈತ ಮುಖಂಡರು ಹಾಜರಿದ್ದರು.

error: Content is protected !!