ಪ್ರೊ.ಬಿ.ಕೃಷ್ಣಪ್ಪರ ಸ್ಮರಣೆ ಕಾರ್ಯಕ್ರಮದಲ್ಲಿ ಜಾರ್ಜ್
ಹರಿಹರ, ಫೆ.4- ರಾಜ್ಯದಲ್ಲಿ ದಲಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದ ಕೀರ್ತಿ ಪ್ರೊ.ಬಿ.ಕೃಷ್ಣಪ್ಪರಿಗೆ ಸಲ್ಲುತ್ತದೆ ಎಂದು ಆರೋಗ್ಯ ಮಾತೆ ಚರ್ಚ್‍ನ ಧರ್ಮಗುರು ಫಾ.ಜಾರ್ಜ್ ಕೆ.ಎ. ಹೇಳಿದರು.
ಅವರು ಇಲ್ಲಿನ ಬೈಪಾಸ್ ಬಳಿಯ ಮೈತ್ರಿವನದಲ್ಲಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರ ಸಮಾಧಿ ಸ್ಥಳದಲ್ಲಿ ಕದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಕದಸಂಸಯ 50ನೇ ಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್‍ರವರು ಸಂವಿಧಾನ ರಚಿಸಿ, ದೇಶದಲ್ಲಿ ಸಾಮಾಜಿಕ ಸಮಾನತೆಗೆ ದಾರಿ ಮಾಡಿಕೊಟ್ಟರು. ಆ ಸಂವಿಧಾನದಿಂದ ಪ್ರೇರಣೆಗೊಂಡ ಕೃಷ್ಣಪ್ಪನವರು, ಕಾಲೇಜಿನ ಅಧ್ಯಾಪಕ ವೃತ್ತಿ ನಿರ್ವಹಿಸುತ್ತಲೇ ರಾಜ್ಯಾದ್ಯಂತ ಸಂಚರಿಸಿ, ದಲಿತ ಸಮುದಾಯಗಳಲ್ಲಿ ಜಾಗೃತಿಯ ದೀಪ ಹಚ್ಚಿ, 2ನೇ ಅಂಬೇಡ್ಕರ್ ಆಗಿ ಹೊರಹೊಮ್ಮಿದರು ಎಂದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಅಂಬೇಡ್ಕರ್ ಅವರು ವಿವಿಧ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದರಿಂದ ದೇಶದಲ್ಲಿನ ದಲಿತರ ದುಸ್ಥಿತಿಯ ಅರಿವು ಅವರಲ್ಲಿ ಮೂಡಿತು. ಹೀಗಾಗಿ ಶಿಕ್ಷಣವೇ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಆಧಾರವಾಗಿದ್ದು, ವಿಶೇಷವಾಗಿ ತಳ ಸಮುದಾಯದ ಜನರು ಸಂಕಷ್ಟಗಳಿಗೆ ಎದೆ ಗುಂದದೆ ಶಿಕ್ಷಣವಂತರಾಗಬೇಕೆಂದರು.
ಕದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಮಾತನಾಡಿ, ಚಂದ್ರಗುತ್ತಿ ಬೆತ್ತಲೆ ಸೇವೆ ಹಾಗೂ ಧರ್ಮದ ಆಸರೆಯಲ್ಲಿ ನಡೆಯುತ್ತಿದ್ದ ಹತ್ತಾರು ಮೌಢ್ಯತೆಗಳ ವಿರುದ್ಧ ಜನಜಾಗೃತಿ ಮೂಡಿಸಿದರು. ಮೊರಾರ್ಜಿ ವಸತಿ ಶಾಲೆ ಯೋಜನೆ ಆರಂಭಕ್ಕೆ ಇವರ ಒತ್ತಾಸೆಯೇ ಕಾರಣವಾಗಿದೆ. ಅಂದು ರಾಜ್ಯದಲ್ಲಿ ಪ್ರಥಮ ಬಾರಿಗೆ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕುರಿತು ಕೃಷ್ಣಪ್ಪನವರೇ ಧ್ವನಿ ಎತ್ತಿದ್ದರು ಎಂದು ಸ್ಮರಿಸಿದರು.
ಕದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ನಾಡಿನ ಮೂಲೆ, ಮೂಲೆಗೆ ಸಂಚರಿಸಿ, ದಲಿತರಲ್ಲಿ ಜಾಗೃತಿ ಮೂಡಿಸಿದ ಪ್ರೊ.ಬಿ.ಕೃಷ್ಣಪ್ಪನವರು ಹರಿಹರದವರೆಂಬುದೇ ಹೆಮ್ಮೆಯ ವಿಷಯವಾಗಿದೆ. ಭೂಮಿ ಹಕ್ಕು ನೀಡುವ ಪಿಟಿಸಿಎಲ್ ಕಾಯ್ದೆ ಜಾರಿ ಮಾಡಿಸುವಲ್ಲಿ ಕೃಷ್ಣಪ್ಪರ ಪಾತ್ರ ಹಿರಿದಾಗಿದೆ ಎಂದರು.
ಕದಸಂಸ ಕಾರ್ಯಕರ್ತರು ಹಾಗೂ ಅತಿಥಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಸಮಾಧಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು. ಕದಸಂಸ ಪದಾಧಿಕಾರಿಗಳಾದ ಹಾಲೇಶ್ ಗಾಂಧಿನಗರ, ದೊಡ್ಡಪ್ಪ ಎ.ಕೆ.ಆವರಗೊಳ್ಳ, ಮಂಜುನಾಥ ಎಲೆಕ್ಟ್ರಿಕಲ್, ಶಿವಶಂಕರ್, ಕಡ್ಲೇಗೊಂದಿ ಗ್ರಾ.ಪಂ ಸದಸ್ಯೆ ಮಾತೆಂಗೆಮ್ಮ ತಿಮ್ಮಪ್ಪ, ಎಸ್.ಟಿ.ಹನುಮಂತಪ್ಪ, ಜ್ಯೋತಿ, ಶೈಲಾ, ಸುನೀತಾ ಸಂಜೀವಪ್ಪ, ರುಕ್ಮಿಣಿ, ಮಾಗೋಡು ಹನುಮಕ್ಕ, ಶಾಂತಮ್ಮ, ಮುಬೀನಾ, ಮಲ್ಲಮ್ಮ, ಗುಡ್ಡಪ್ಪ, ಪರುಶುರಾಮ, ಮರಿಯಮ್ಮ, ಕೊಟ್ರೇಶ್, ಶಂಷಾದ್, ಮುಬೀನಾಬಾನು, ನಾಗಮ್ಮ, ಹನುಮಕ್ಕ, ಗಂಗಮ್ಮ, ಶಾಹತಾಜ್ ಬಾನು, ಪುಷ್ಪ, ಶಕಂತಲಾ, ಭಾಗ್ಯಮ್ಮ, ಮಲ್ಲಮ್ಮ, ರತ್ನಮ್ಮ ಹಾಗೂ ಇತರರಿದ್ದರು.