ಮಲೇಬೆನ್ನೂರು, ಫೆ.2 – ಜಿ. ಬೇವಿನಹಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಸ್ಪರ್ಶ ಕುಷ್ಟರೋಗ ಅರಿವು ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟಿಹೆಚ್‌ಓ ಡಾ. ಪ್ರಶಾಂತ್, ಕುಷ್ಟ ರೋಗವು ಚರ್ಮ ಮತ್ತು ನರಕ್ಕೆ ಸಂಬಂಧಪಟ್ಟಂತ ಕಾಯಿಲೆಯಾಗಿದ್ದು, ಪ್ರತಿ ದಿನ ಸ್ನಾನ ಮಾಡುವಾಗ ತಮ್ಮ ಮೈ ಮೇಲಿನ ಮಚ್ಚೆಗಳನ್ನು ಗಮನಿಸಿಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲಿ ಚರ್ಮದ ಮೇಲ್ಭಾಗದಲ್ಲಿ ತಿಳಿ-ಬಿಳಿ ತಾಮ್ರ ವರ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಈ ಮಚ್ಚೆಗಳಿಗೆ ಸ್ಪರ್ಶ ಜ್ಞಾನವಿರುವುದಿಲ್ಲ. ಆ ಜಾಗದಲ್ಲಿ ನೋವು ಅಥವಾ ಮುಟ್ಟಿದರು ಅರಿವಿಲ್ಲದಿರುವುದು, ಸುಟ್ಟರೂ ತಿಳಿಯದು, ಅಂಗೈ ಮತ್ತು ಪಾದಗಳು ಜೋಮು ಹಿಡಿದಾಗ ವೈದ್ಯರಲ್ಲಿಗೆ ಬಂದಾಗ ಮಾತ್ರ ಕಾಯಿಲೆ ಬಗ್ಗೆ ಖಾತ್ರಿ ಆಗುತ್ತದೆ ಎಂದರು.
ತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಮಾತನಾಡಿ ಕುಷ್ಟ ರೋಗವು ದೇವರ ಶಾಪವಲ್ಲ. ಈ ರೋಗವು ಲೆಪ್ರೆ ಬ್ಯಾಕ್ಟೀರಿಯದಿಂದ ಬರುತ್ತದೆ. ಇದು ಗಾಳಿ ಮೂಲಕ ಹರಡುವ ಕಾಯಿಲೆಯಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಯಾವುದಾದರೂ ಚರ್ಮದ ಮೇಲೆ ಗಾಯವಾದರೆ ವಾಸಿ ಮಾಡಿಕೊಳ್ಳುತ್ತೇವೆ. ಚರ್ಮದ ಮೇಲೆ ಕಜ್ಜಿ, ಹುಳುಕಡ್ಡಿ, ಇವುಗಳು ತುರಿಕೆಯಿಂದ ಕೂಡಿದ ಚರ್ಮ ಕಾಯಲೆಯಾಗಿದೆ. ಇವುಗಳನ್ನು ಬೇಗ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆಯುತ್ತೀರಿ. ಆದರೆ ಕುಷ್ಟರೋಗದ ಚಿಹ್ನೆಯಾದ ಬಿಳಿ-ತಿಳಿ ತಾಮ್ರ ವರ್ಣದ ಮಚ್ಚೆಯು ತುರಿಕೆ ಇರುತ್ತದೆ. ಆ ಜಾಗದಲ್ಲಿ ಬೆವರು ಹಾಗೂ ಅರಿವು ಆಗುವುದಿಲ್ಲ. ಆದ್ದರಿಂದ ಸ್ನಾನ ಮಾಡುವ ಸಮಯದಲ್ಲಿ ನಿಮ್ಮ ತಾಯಿಯವರಿಗೆ ಬೆನ್ನು ಹಿಂಭಾಗ ಅಥವಾ ಕಿವಿಯ ಹಿಂಭಾಗ ಮಚ್ಚೆಗಳು ಇರುವಿಕೆ ಬಗ್ಗೆ ಕೇಳಿ. ಅಂತಹ ಮಚ್ಚೆಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಯವರನ್ನು ಸಂಪರ್ಕಿಸಿ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಜಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಯಿಲೆ ಬಂದಾಗ ಗುಣಪಡಿಸಲು ಪ್ರಯತ್ನಿಸುವುದಕ್ಕಿಂತ ಕಾಯಿಲೆಗಳು ಬರದಂತೆ ಜಾಗೃತರಾಗೋಣ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಜಿತ್, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್ ಅವರು ಕುಷ್ಟರೋಗ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸಿಎಚ್‌ಓ ಕಾವ್ಯ ಮತ್ತು ಆಶಾ ಕಾರ್ಯಕರ್ತರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.