ಕಿರಿಯ ವಕೀಲರಿಗೆ ವಾಟ್ಸ್‍ಆಪ್, ಫೇಸ್ಬುಕ್‍ನಿಂದ ಜ್ಞಾನದ ಕೊರತೆ : ಹಿರಿಯ ನ್ಯಾಯಾಧೀಶರಾದ ಭಾರತಿ

ಕಿರಿಯ ವಕೀಲರಿಗೆ ವಾಟ್ಸ್‍ಆಪ್, ಫೇಸ್ಬುಕ್‍ನಿಂದ ಜ್ಞಾನದ ಕೊರತೆ : ಹಿರಿಯ ನ್ಯಾಯಾಧೀಶರಾದ ಭಾರತಿ

ಹರಪನಹಳ್ಳಿ, ಜ. 30 – ವಕೀಲ ವೃತ್ತಿ ನಿಂತ ನೀರಾಗಬಾರದು ಹರಿಯುವ ನದಿಯಾಗಿರಬೇಕು. ಪ್ರತಿ ನಿತ್ಯ ವಕೀಲರು ಸಿಆರ್‍ಪಿಸಿ, ಐಪಿಸಿಯ ಕಾನೂನಿನ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ವಾಟ್ಸ್‍ಆಪ್, ಫೇಸ್ಬುಕ್ ಮೊರೆ ಹೋಗಬಾರದು ಎಂದು ಕಿರಿಯ ವಕೀಲರುಗಳಿಗೆ  ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ತಿಳಿಸಿದರು.

 ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ  ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ,  ಪುರಸಭೆ ಕಾರ್ಯಾಲಯ, ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ ಕುರಿತು, ಕಾನೂನು ಅರಿವು ಮತ್ತು ಮಹಾತ್ಮಗಾಂಧೀಜಿಯವರ ಹುತಾತ್ಮರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳು ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

 ಇಂತಹ ಸಂದರ್ಭದಲ್ಲಿ ನಾವುಗಳು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹನೀಯರನ್ನು ಇಂದು ನಾವು ನೆನೆಯಬೇಕಾಗಿದೆ. ಆಗಿನ ಕಾಲದ ಮಹನೀಯರ ಹೋರಾಟದ ಕಿಚ್ಚನ್ನು ನಾವು ರೂಢಿಸಿಕೊಳ್ಳಬೇಕು ಎಂದರು.

 ಸ್ವಚ್ಚತೆಯು ಮಹಾತ್ಮ ಗಾಂಧೀಜೀಯವರ ಕನಸಾಗಿತ್ತು. ಅವರ ಕನಸನ್ನು  ನನಸು ಮಾಡಲು ನಾವುಗಳು ದೇಶದ ಪೌರ ಕಾರ್ಮಿಕರ ಜೊತೆ ಕೈ ಜೋಡಿಸಿದಾಗ ಮಾತ್ರ ನಗರ ಮತ್ತು ಪಟ್ಟಣಗಳು, ಗ್ರಾಮೀಣ ಪ್ರದೇಶಗಳು ಸ್ವಚ್ಚವಾಗಿರುವುದಕ್ಕೆ ಸಾಧ್ಯವಾಗಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಸಿವಿಲ್ ನ್ಯಾಯಾಧೀಶರು, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಫಕ್ಕೀರವ್ವ ಕೆಳಗೇರಿ ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಸಿ. ಪೀರ್ ಅಹಮ್ಮದ್,  ಕಾರ್ಯದರ್ಶಿ ಜಿ.ಎಸ್.ಎಂ. ಕೊಟ್ರಯ್ಯ, ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ವಕೀಲ ಎಂ. ಮೃತಂಜಯ, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂದಿಗಳಾದ ಕೊಟ್ರೇಶ್, ಬಸವರಾಜ್  ಸೇರಿದಂತೆ ಇತರೆ ಹಿರಿಯ ಮತ್ತು ಕಿರಿಯ ವಕೀಲರು ಹಾಗೂ ಉಭಯ ನ್ಯಾಯಾಲಯಗಳ ಸಿಬ್ಬಂದಿಗಳು ಹಾಜರಿದ್ದರು.

error: Content is protected !!