ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು

ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು

ಹರಪನಹಳ್ಳಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ: ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌

ಹರಪನಹಳ್ಳಿ, ಜ.28- ಸಂವಿಧಾನ ಜಾರಿಯಿಂದಲೇ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು ಸಿಕ್ಕಿವೆ. ಆದ್ದರಿಂದ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಅವರು ಪಟ್ಟಣದ ಸ್ಟೇಡಿಯಂನಲ್ಲಿ ತಾಲ್ಲೂಕು ಆಡಳಿತದ ವತಿಯಿಂದ 75ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂವಿಧಾನದಿಂದ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಶಿಕ್ಷಣ ಹಕ್ಕುಗಳು, ಮೂಲಭೂತ ಹಕ್ಕುಗಳು, ಧಾರ್ಮಿಕ ಹಕ್ಕುಗಳು ದಕ್ಕಿದ್ದು ಎಂದರು.

ಆದ್ದರಿಂದ ಸಂವಿಧಾನ ರಚಿಸಿದ ಡಾ. ಬಿ.ಆರ್.ಅಂಬೇಡ್ಕರ್‌ ಮತ್ತು ಅವರ ತಂಡವನ್ನು ಇಂದು ಸ್ಮರಿಸಬೇಕಾಗಿದೆ ಎಂದರು. ಸಂವಿಧಾನದಿಂದ ಎಲ್ಲದರಲ್ಲೂ ಸ್ವಾತಂತ್ರ್ಯ ಸಿಕ್ಕಿದೆ ಎಂದು ಸ್ವೇಚ್ಚಾಚಾರ ಬೇಡ ಎಂದು ಅವರು ಸಲಹೆ ನೀಡಿದರು.

5 ಗ್ಯಾರಂಟಿಗಳಿಂದ ಕೊಟ್ಟ ಮಾತು ಈಡೇರಿಕೆ: ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದರ ಮೂಲಕ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದು ಹೇಳಿದ ಅವರು, ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ನೀಡಿದೆ ಎಂದು ನುಡಿದರು.

26.67 ಲಕ್ಷ ಮಹಿಳೆಯರು ಟ್ರಾವೆಲ್‌ : ಶಕ್ತಿ ಯೋಜನೆಯಡಿ ತಾಲ್ಲೂಕಿನಲ್ಲಿ ಕಳೆದ ಡಿ.23 ರವರೆಗೆ 26.67 ಲಕ್ಷ ಮಹಿಳೆಯರು ಟ್ರಾವಲ್‌ ಮಾಡಿದ್ದು, ರಾಜ್ಯ ಸರ್ಕಾರದಿಂದ 8.69 ಕೋಟಿ ಹಣವನ್ನು ತುಂಬಲಾಗಿದೆ ಎಂದರು.

65 ಸಾವಿರ ಉಚಿತ ವಿದ್ಯುತ್‌ ಗ್ರಾಹಕರು : ತಾಲ್ಲೂಕಿನಲ್ಲಿ 200 ಯುನಿಟ್‌ ಒಳಗೆ ಉಚಿತ ವಿದ್ಯುತ್ತನ್ನು 65 ಸಾವಿರ ಫಲಾನುಭವಿಗಳು ಬಳಸಿಕೊಂಡಿದ್ದಾರೆ. 65 ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಪಲಾನುಭವಿಗಳು ಇದ್ದಾರೆ ಎಂದು ಅವರು ನುಡಿದರು.

ಆದ್ದರಿಂದ ನಮ್ಮದು ಮಾತಿಗೆ ತಪ್ಪದ ಸರ್ಕಾರವಾಗಿದೆ ಎಂದು ಅವರು ತಿಳಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್‌ ಅವರು, ನಾವು ಮಾಡುವ ಕರ್ತವ್ಯವನ್ನು ಉತ್ತಮವಾಗಿ ಮಾಡಿ ದೇಶಕ್ಕೆ, ರಾಜ್ಯಕ್ಕೆ ಉತ್ತಮ ಹೆಸರು ತರಬೇಕು. ದೇಶದ ಎಲ್ಲಾ ರಾಜ್ಯಗಳನ್ನು ಒಂದು ಸಂವಿಧಾನದ ಅಡಿ ತಂದು ಕೊಟ್ಟಂತಹ ದಿನ ಗಣರಾಜ್ಯೋತ್ಸವ ಎಂದು ತಿಳಿಸಿದರು.

ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್‌ ಮಾತನಾಡಿ ಸ್ವಾತಂತ್ರ್ಯ , ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ನಮ್ಮ ಸಂವಿಧಾನದಲ್ಲಿ ಇರುವ ಐದು ಪ್ರಮುಖ ಮೌಲ್ಯಗಳು, ದೇಶದ ಸಂವಿಧಾನವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಕೃಷಿ, ಶಿಕ್ಷಣ, ತೋಟಗಾರಿಕೆ, ಅಗ್ನಿಶಾಮಕ ಇಲಾಖೆಗಳನ್ನು ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಪುರಸಭಾ ಸದಸ್ಯರುಗಳಾದ ಅಬ್ದುಲ್‌ ರಹಿಮಾನ್, ಉದ್ಧಾರ ಗಣೇಶ್‌, ಲಾಟಿ ದಾದಾಪೀರ್‌, ಮಂಜುನಾಥ ಇಜಂತಕರ್, ಜಾಕೀರ್‌, ಚಿಕ್ಕೇರಿ ಹನುಮವ್ವ, ಡಿವೈಎಸ್ಪಿ ವೆಂಕಟಪ್ಪ ನಾಯಕ, ತಹಶೀಲ್ದಾರ್‌ ಬಿ.ವಿ.ಗಿರೀಶ್‌ಬಾಬು, ಸಿಪಿಐ ನಾಗರಾಜ್‌ ಎಂ.ಕಮ್ಮಾರ, ತಾ.ಪಂ ಇಒ ಪ್ರಕಾಶ್‌, ಬಿಆರ್‌ಸಿ ಹೊನ್ನತ್ತೆಪ್ಪ, ದೈಹಿಕ ಪರಿವೀಕ್ಷಕ ಷಣ್ಮುಖಪ್ಪ, ಆರ್‌ಎಫ್‌ಒ ಮಲ್ಲಪ್ಪ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ್‌, ಸಮಾಜ ಕಲ್ಯಾಣ ಇಲಾಖೆಯ ರೇಣುಕಾದೇವಿ, ಬಿಸಿಎಂನ ವಿಜಯಲಕ್ಷ್ಮಿ, ಸಹಾಯಕ ಕೃಷಿ ನಿರ್ದೇಶಕ ಬಿ.ಸಿ.ಉಮೇಶ್‌, ಗುಂಡಗತ್ತಿ ಕೊಟ್ರಪ್ಪ ಇದ್ದರು.

error: Content is protected !!