ಪ್ರಧಾನಿ ಮೋದಿ ಅನ್ನ-ಸೂರು ಸಿಗದ ಜನರ ಕ್ಷಮೆ ಕೇಳಲಿ

ಪ್ರಧಾನಿ ಮೋದಿ ಅನ್ನ-ಸೂರು ಸಿಗದ ಜನರ ಕ್ಷಮೆ ಕೇಳಲಿ

ಪ್ರೊ. ಕೃಷ್ಣಪ್ಪ ಭವನದಲ್ಲಿ ಸಾಣೇಹಳ್ಳಿ ಶ್ರೀ ಅಭಿಪ್ರಾಯ

ಮಲೇಬೆನ್ನೂರು, ಜ.28- ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮಿಸು ಎಂದು ಕೇಳಬೇಕಾಗಿರುವುದು ಶ್ರೀರಾಮನನ್ನಲ್ಲ, ದೇಶದಲ್ಲಿ ಸ್ವಂತ ಸೂರು, ಎರಡೊತ್ತು ಊಟ ಇಲ್ಲದೇ ಅಲೆಮಾರಿಗಳಾಗಿರುವ ಜನರನ್ನು ಕ್ಷಮೆ ಕೇಳಬೇಕೆಂದು ಸಾಣೇಹಳ್ಳಿ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಸಂಜೆ ಹನಗವಾಡಿ ಸಮೀಪ ಇರುವ ಪ್ರೊ. ಬಿ.ಕೃಷ್ಣಪ್ಪ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 2 ದಿನಗಳ ಕೌಶಲ್ಯ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ನಮ್ಮ ಈ ಮಾತು ಬಿಜೆಪಿಗೆ ಅಥವಾ ಮೋದಿ ಅವರಿಗೆ ಟೀಕೆ ಮಾಡುವುದಲ್ಲ, ನಾವು ಯಾವುದೇ ವಿಷಯದಲ್ಲಿ ಸತ್ಯ ಹೇಳಿದರೆ, ಅದು ಕೆಲವರಿಗೆ ಇಷ್ಟ ಆಗಲ್ಲ. ಸತ್ಯ ಹೇಳುವವರಿಗೆ ಸಮಾಜ ಘಾತುಕರೆಂಬ ಹಣೆಪಟ್ಟಿ ಹಚ್ಚುವ ಸಿಮೀತ ಬುದ್ಧಿಯ ಜನರಿದ್ದಾರೆ.

ನಾವು ಇತ್ತೀಚೆಗೆ ಗಣಪತಿ ಪೂಜೆ ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳಿದ್ದನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳದೇ ವಿರೋಧ ವ್ಯಕ್ತಪಡಿಸಿದರು. ಇನ್ನೂ ಕೆಲವರು ನಮ್ಮನ್ನು ಶಿವನನ್ನು ಪೂಜಿಸುವ ನೀವು ಗಣಪತಿಯನ್ನು ಏಕೆ ಒಪ್ಪುವುದಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ನಾವು ನಮ್ಮ ಶಿವ ಸರ್ವಜ್ಞ ಎಂಬ ಉತ್ತರ ಕೊಟ್ಟಿದ್ದೇವೆ.

ಅನ್ಯಾಯ, ದ್ರೋಹ, ಮೋಸ ಕಂಡಾಗ ತೆರೆ ಎತ್ತಿ ಖಂಡಿಸಬೇಕು. ಎಲ್ಲಾ ರೀತಿಯ ಮೌಢ್ಯಗಳಿಂದ ಜನರು ಹೊರ ಬಂದು ವೈಜ್ಞಾನಿಕತೆ, ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಯಜ್ಞ-ಯಾಗಾದಿಗಳನ್ನು ನಿಲ್ಲಿಸಿ, ನಮ್ಮ ಆಚಾರ-ವಿಚಾರಗಳನ್ನು ನಾವೇ ತಿದ್ದಿಕೊಳ್ಳಬೇಕು. ಕಷ್ಟಪಟ್ಟು ನಾವು ಮನೆ ಕಟ್ಟಿ ಇನ್ನೊಬ್ಬರನ್ನು ದುಡ್ಡ ಕೊಟ್ಟು ಕರೆಸಿ ಹೊಗೆ ಹಾಕಿಸಿಕೊಳ್ಳಬೇಡಿ ಎಂದು ಸಾಣೇಹಳ್ಳಿ ಸ್ವಾಮೀಜಿ ಎಚ್ಚರಿಸಿದರು.

ಸತೀಶ್ ಜಾರಕಿಹೊಳಿ ಅವರೂ ಸ್ಮಶಾನದಲ್ಲಿ ಕಾರ್ಯಕ್ರಮ ಮಾಡುವ ಜನರಿಗೆ ಸ್ಮಶಾನದ ಬಗ್ಗೆ ಇರುವ ಭಯ ಹಾಗೂ ಮೂಢನಂಬಿಕೆ ದೂರ ಮಾಡಿದ್ದಾರೆ. ಅಷ್ಟೇ ಅಲ್ಲದೇ, ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆ ಮೂಲಕ ಇಂತಹ ನೂರಾರು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆಂದು ಸಾಣೇಹಳ್ಳಿ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೊ. ಬಿ.ಕೃಷ್ಣಪ್ಪನವರ ಈ ಸಾಂಸ್ಕೃತಿಕ ಭವನದಲ್ಲಿ ವೈಚಾರಿಕ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ನೀಡಿ, ಅವರ ಬದುಕನ್ನು ಭದ್ರಗೊಳಿಸುವ ಮೂಲಕ ಅವರ ಆಶಯಗಳನ್ನು ಸಾಕಾರಗೊಳಿಸಲಾಗುತ್ತಿದೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆದರೆ ಸಾಲದು, ಅವರ ಆದರ್ಶಗಳನ್ನು ಬಿತ್ತುವ ಅಕಾಡೆಮಿ ರಚನೆ ಆಗಬೇಕು. ಜೊತೆಗೆ ಹುಲಿಕಲ್ ನಟರಾಜ್ ಅವರ ಆಶಯದಂತೆ ರಾಜ್ಯದಲ್ಲಿ ವೈಜ್ಞಾನಿಕ ಅಕಾಡೆಮಿಯೂ ಜಾರಿಗೆ ತರುವ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಸಾಣೇಹಳ್ಳಿ ಸ್ವಾಮೀಜಿ ಹೇಳಿದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ. ಎ.ಬಿ.ರಾಮಚಂದ್ರಪ್ಪ ಮಾತನಾಡಿ, ತರ್ಕ-ವೈಚಾರಿಕತೆ ಇಲ್ಲದೇ ಸತ್ಯಾನ್ವೇಷಣೆ ಮಾಡಲು ಸಾಧ್ಯವಿಲ್ಲ. ನಮಗೆ ಪರಂಪರೆಬೇಕು. ಆದರೆ, ಅದರ ಹೆಸರಿನಲ್ಲಿಯೇ ಹಿಂದೆ ಉಳಿಯುವ ಕೆಲಸ ಆಗಬಾರದು. ಈ ನಿಟ್ಟಿನಲ್ಲಿಯೇ ಸತೀಶ್ ಜಾರಕಿಹೊಳಿ ಅವರು, ರಾಜ್ಯದ 9 ಕಡೆಗಳಲ್ಲಿ ಇಂತಹ ಅಧ್ಯಯನ ಕೇಂದ್ರಗಳನ್ನು ಮಾಡಿದ್ದಾರೆ ಎಂದರು.

ರಾಜ್ಯ ವೈಚಾರಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೌಢ್ಯ ಮುಕ್ತ ಸಮಾಜ ನಮ್ಮ ಗುರಿಯಾಗಿದ್ದು, ಇದಕ್ಕೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಬದಲಾವಣೆ ಸಾಧ್ಯ. ಅದಕ್ಕಾಗಿಯೇ ರಾಜ್ಯದಲ್ಲಿ ವೈಜ್ಞಾನಿಕ ಅಕಾಡೆಮಿ ಸ್ಥಾಪನೆ ಆಗಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪದಾಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ಮತ್ತು ಹನಗವಾಡಿ ಗ್ರಾ.ಪಂ. ಅಧ್ಯಕ್ಷ ತಿಪ್ಪೇಶ್, ಬೆಳ್ಳೂಡಿ ರಾಮಚಂದ್ರಪ್ಪ, ಸಾಬೀರ್, ಉಕ್ಕಡಗಾತ್ರಿ ಮಂಜು, ಆರ್.ಧನರಾಜ್ ಮತ್ತಿತರರು ಭಾಗವಹಿಸಿದ್ದರು.

error: Content is protected !!