ಮಲೇಬೆನ್ನೂರು : ಎಲ್ಲೆಡೆ ರಾಮಜಪ, ಪೂಜೆ, ಅನ್ನ ಸಂತರ್ಪಣೆ, ರಕ್ತದಾನ

ಮಲೇಬೆನ್ನೂರು : ಎಲ್ಲೆಡೆ ರಾಮಜಪ, ಪೂಜೆ, ಅನ್ನ ಸಂತರ್ಪಣೆ, ರಕ್ತದಾನ

ಮಲೇಬೆನ್ನೂರು, ಜ. 24- ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಮಲೇಬೆನ್ನೂರು ಸೇರಿದಂತೆ, ಸುತ್ತಮುತ್ತ ಹಳ್ಳಿಗಳಲ್ಲಿ ವಿಶೇಷ ಪೂಜೆ, ರಾಮ ಜಪ, ಭಜನೆ, ಅನ್ನ ಸಂತರ್ಪಣೆ ಮತ್ತು ಸಂಜೆ ಶ್ರೀ ರಾಮ ದೀಪೋತ್ಸವವನ್ನು ಸಂಭ್ರಮ ಹಾಗೂ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಎಲ್ಲೆಡೆ  ಜೈರಾಮ್ ಘೋಷಣೆ ಮೊಳಗಿದವು. ಪಟ್ಟಣದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀರಾಮನ ಭಾವಚಿತ್ರಕ್ಕೆ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ಸಮಯದಲ್ಲೇ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪ್ರಸಾದ ವಿನಿಯೋಗಿಸಲಾಯಿತು.

ಮುಖ್ಯ ವೃತ್ತದಲ್ಲಿ ಪಟ್ಟಣದ ಬೆಳ್ಳಿ-ಬಂಗಾರ ವರ್ತಕರ ಸಂಘದಿಂದ ಶ್ರೀ ರಾಮೋತ್ಸವ ಆಚರಣೆಯೊಂದಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

ನಂದಿಗುಡಿ ರಸ್ತೆಯಲ್ಲಿರುವ ಶ್ರೀ ಜೋಡಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮನ ಪ್ರತಿಮೆ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಆಂಜನೇಯ ಸ್ವಾಮಿಗೆ ಮಾಡಿದ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು.

ಇಲ್ಲಿಯೂ ಸಹ ಲಾಡು, ಪಾಯಸ, ಅನ್ನ, ಸಾಂಬಾರ್ ಒಳಗೊಂಡ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಜನ ಭಾಗವಹಿಸಿದ್ದರು.

ಜಿಗಳಿ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಮತ್ತು ಶ್ರೀ ವಿವೇಕಾನಂದ ಸ್ವಯಂ ಪ್ರೇರಿತ ರಕ್ತನಿಧಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 66 ಜನ ರಕ್ತದಾನ ಮಾಡಿ ಶ್ರೀ ರಾಮನ ಮೇಲಿನ ಭಕ್ತಿ ಮೆರೆದರು. ಹಿಂದೂ ಜಾಗರಣಾ ವೇದಿಕೆಯ ಕಜ್ಜರಿ ಹರೀಶ್, ಶಿವರಾಜ್, ಶ್ರೀನಿವಾಸ್, ಆಕಾಶ್, ಬೀರೇಶ್, ಸೂರಿ, ಕೇಶವ, ಸಂಜು, ಕಾರ್ತಿಕ್ ಮತ್ತಿತರರು ಹಾಜರಿದ್ದು, ರಕ್ತದಾನ ಶಿಬಿರ ನಡೆಸಿಕೊಟ್ಟರು.

ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆಯೊಂದಿಗೆ ಶ್ರೀ ರಾಮೋತ್ಸವ ಆಚರಿಸಲಾಯಿತು.

ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀ ರಾಮ ದೀಪೋತ್ಸವ ಆಚರಿಸಿ, ಪಟಾಕಿ ಸಿಡಿಸಲಾಯಿತು. ಅಲ್ಲದೇ, ಪಟ್ಟಣದ ಗ್ರಾಮದೇವತೆ ಶ್ರೀ ಏಕನಾಥೇಶ್ವರಿ, ಶ್ರೀ ಹಟ್ಟಿ ದುರ್ಗಾಂಬಿಕೆ, ಶ್ರೀ ಬೀರಲಿಂಗೇಶ್ವರ, ಶ್ರೀ ಬಸವೇಶ್ವರ, ಶ್ರೀ ಕಲ್ಲೇಶ್ವರ, ಶ್ರೀ ಕಾಲಭೈರವ, ಪಿಡಬ್ಲ್ಯೂಡಿಯ ಶ್ರೀ ಚೌಡೇಶ್ವರಿ ದೇವಸ್ಥಾನಗಳಲ್ಲೂ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆದವು.

ಸಂಜೆ ಪಟ್ಟಣದ ಎಲ್ಲಾ ದೇವಸ್ಥಾನಗಳೂ ಸೇರಿದಂತೆ, ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲಿ ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಲಾಯಿತು.

ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ಉಪ ತಹಶೀಲ್ದಾರ್ ಆರ್. ರವಿ, ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್, ಪಿಎಸ್ಐ ಪ್ರಭು ಕೆಳಗಿನ ಮನೆ ಸೇರಿದಂತೆ ಪುರಸಭೆ ಸದಸ್ಯರು, ಮುಖಂಡರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

error: Content is protected !!