ಸಂತ ಸೇವಾಲಾಲ್ ಜಯಂತಿ : ಸಿದ್ಧತೆಗೆ ಡಿಸಿ ಸೂಚನೆ

ಸಂತ ಸೇವಾಲಾಲ್ ಜಯಂತಿ : ಸಿದ್ಧತೆಗೆ ಡಿಸಿ ಸೂಚನೆ

ದಾವಣಗೆರೆ, ಜ.24- ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿಯನ್ನು ಬರುವ ಫೆಬ್ರವರಿ 13 ರಿಂದ 15 ರ ವರೆಗೆ ಆಚರಿಸಲಾಗುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ. 

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ಕ್ಷೇತ್ರ ಸೂರಗೊಂಡನಕೊಪ್ಪದಲ್ಲಿ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಟಾನದ ಸಹಯೋಗದಲ್ಲಿ ಜಯಂತಿಯನ್ನು 3 ದಿನಗಳ ಕಾಲ ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ರಾಜ್ಯದ ಇತರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತರು – ಶ್ವೇತವಸ್ತ್ರ ಮಾಲಾಧಾರಿಗಳು ಭಾಗವಹಿಸಲಿದ್ದು, 3 ಲಕ್ಷಕ್ಕೂ ಹೆಚ್ಚು ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವರು. 

ಲಕ್ಷಾಂತರ ಭಕ್ತಾದಿಗಳು ಭಾಗವಹಿಸುವುದರಿಂದ ಇಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ, ಸುಗಮ ಸಂಚಾರ, ಆರೋಗ್ಯ ಮತ್ತು ನೈರ್ಮಲ್ಯತೆ ಕಾಪಾಡುವುದು, ವೇದಿಕೆ ನಿರ್ಮಾಣ, ಆಸನದ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಸೇರಿದಂತೆ ಸ್ನಾನ ಮತ್ತು ಶೌಚಾಲಯದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೆರವೇರಿಸಬೇ  ಕಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ಉಪಮುಖ್ಯಮಂತ್ರಿ, ಸಚಿವರು, ಗಣ್ಯ ವ್ಯಕ್ತಿಗಳು ಸಹ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!