ಫೆ.3, 4ರಂದು ನಗರದಲ್ಲಿ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನ

ಫೆ.3, 4ರಂದು ನಗರದಲ್ಲಿ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ದಾವಣಗೆರೆ, ಜ. 23- ಬರುವ ಫೆಬ್ರವರಿ 3 ಹಾಗೂ 4ರಂದು ನಗರದಲ್ಲಿ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ರಾಜ್ಯ ಘಟಕದ ನೇತೃತ್ವ ಹಾಗೂ ಜಿಲ್ಲಾ ಘಟಕದ ಆತಿಥ್ಯ, ಜಿಲ್ಲಾ ವರದಿಗಾರರ ಕೂಟದ ಸಹಯೋಗದೊಂದಿಗೆ ಶ್ರೀ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ  ಭವನದಲ್ಲಿ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರೂ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಜಿಲ್ಲೆಯ ಅನೇಕ ದಾನಿಗಳ ಸಹಕಾರದೊಂದಿಗೆ ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಐದೂವರೆ ಸಾವಿರಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ.

31 ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ತಾಲ್ಲೂಕು ಆಗಿದ್ದ ದಾವಣಗೆರೆಯಲ್ಲಿ 1992ರಲ್ಲಿ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ಸಮ್ಮೇಳನ ನಡೆದಿತ್ತು. ಈಗ ದಾವಣಗೆರೆ ರಚನೆಯಾದ 25 ವರ್ಷಗಳ ನಂತರ ಇದೇ ಪ್ರಪ್ರಥಮ ಬಾರಿಗೆ ಸಮ್ಮೇಳನ ನಡೆಯುತ್ತಿರುವುದು ದಾವಣಗೆರೆ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಪತ್ರಕರ್ತರ ಸಮಸ್ಯೆಗಳು, ಪತ್ರಿಕೋದ್ಯಮದ ಮುಂದಿರುವ ಸವಾಲುಗಳು, ಭಾಷಾ ಜ್ಞಾನ ಸೇರಿದಂತೆ ಹಲವಾರು ವಿಷಯಗಳ ಕುರಿತಂತೆ ವಿವಿಧ ಗೋಷ್ಠಿಗಳು ಸಮ್ಮೇಳದಲ್ಲಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಫೆಬ್ರವರಿ 3ರಂದು ಬೆಳಿಗ್ಗೆ 9 ಗಂಟೆೆಗೆ ಕುವೆಂಪು ಕನ್ನಡ ಭವನದಿಂದ ಪತ್ರಕರ್ತರ  ಬೃಹತ್ ಮೆರವಣಿಗೆ ನಡೆಯಲಿದೆ. ನಂತರ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತರರು ಭಾಗವಹಿಸಲಿದ್ದಾರೆ.

ಫೆಬ್ರವರಿ 4ರ ಸಮಾರೋಪ ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಎರಡು ದಿನಗಳ ಕಾಲ ಊಟ, ವಸತಿ ಸೌಲಭ್ಯ  ಕಲ್ಪಿಸಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಳ್ಳ ಲಾಗುತ್ತಿದೆ  ಎಂದು ಮಂಜುನಾಥ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಖಜಾಂಚಿ ಮಧು ನಾಗರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಖಜಾಂಚಿ ಎನ್‌.ವಿ.ಬದರಿನಾಥ್, ಕಾರ್ಯದರ್ಶಿ ಜೆ.ಎಸ್. ವೀರೇಶ್, ಪ್ರಚಾರ ಸಮಿತಿಯ ಎ. ನಿಂಗಪ್ಪ, ಇತರರು ಉಪಸ್ಥಿತರಿದ್ದರು.

error: Content is protected !!