ಪ್ರಕೃತಿಯಲ್ಲಿ ನಡೆಯುವ ಉತ್ತಮ ಬದಲಾವಣೆಯೇ `ಸಂಕ್ರಾಂತಿ’

ಪ್ರಕೃತಿಯಲ್ಲಿ ನಡೆಯುವ ಉತ್ತಮ ಬದಲಾವಣೆಯೇ `ಸಂಕ್ರಾಂತಿ’

ದಾವಣಗೆರೆ, ಜ.19- ಬದಲಾವಣೆ ಪ್ರಕೃತಿಯ ನಿಯಮ, ಪ್ರಕೃತಿಯಲ್ಲಿ ನಡೆಯುವ ಉತ್ತಮ ಬದಲಾವಣೆಯೇ ಸಂಕ್ರಾಂತಿ ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೋಗಾಚಾರ್ಯ ರಾಘವೇಂದ್ರ ಗುರೂಜಿ  ಅಭಿಪ್ರಾಯ ಪಟ್ಟರು. 

ನಗರದ  ಆದರ್ಶ ಯೋಗ ಪ್ರತಿಷ್ಠಾನ, ಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಕ್ರಾಂತಿ ಹಬ್ಬದ  ಪ್ರಯುಕ್ತ ಸಂಕ್ರಾಂತಿ ಸುಗ್ಗಿ ಹಾಡುಗಳು- ಸುಗಮ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಗುರೂಜಿ ಮಾತನಾಡಿದರು. 

ಸಂಕ್ರಾಂತಿ ಎಂದರೆ ಸಮ್ಯಕ್ ಎಂದರ್ಥ, ಸಮ್ಯಕ್ ಎಂದರೆ ಉತ್ತಮ ರೀತಿ, ಕ್ರಾಂತಿ ಎಂದರೆ ಬದಲಾವಣೆ ಎಂದರ್ಥ. ಸಂಕ್ರಾಂತಿ ಒಂದು ಚಲನಶೀಲತೆಯ ಹಬ್ಬ. ಪ್ರತಿಬಾರಿಯೂ ರಾಶಿ ಚಕ್ರದ ಚಿಹ್ನೆ ಬದಲಾದಾಗ ಗ್ರಹದ ಚಲನೆಯನ್ನು ಸೂಚಿಸಲು ಈ ಚಲನೆಯಿಂದ ನಮ್ಮ ಜೀವನವು ಪೋಷಿಸಲ್ಪಟ್ಟಿದೆ ಎಂದು ಅರ್ಥ ಮಾಡಿಕೊಳ್ಳಲು   ಸಂಕ್ರಾಂತಿ ಎಂದು ಕರೆಯುವರು. ಈ ದಿನ ಸೂರ್ಯನು ಮಕರ ರಾಶಿಯಲ್ಲಿ ಸಂಕ್ರಮಣಗೊಳ್ಳುತ್ತಾನೆ. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ದಿಕ್ಕು ಬದಲಿಸುತ್ತಾನೆ.   ಮಕರ ಸಂಕ್ರಾಂತಿಯಿಂದ ರಥಸಪ್ತಮಿಯವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ದಿನಗಳಲ್ಲಿ ಮಾಡಿದ ದಾನ ಮತ್ತು ಪುಣ್ಯ ಕರ್ಮ ವಿಶೇಷ ಫಲವನ್ನು ಕೊಡುತ್ತವೆ.     ದಿನಗಳಲ್ಲಿ ವಾತಾವರಣವು ತಂಪಾಗಿದ್ದು ಚಳಿಗೆ ಮೈ ಕೈ ಚರ್ಮ ಸುಕ್ಕುಗಟ್ಟಿ ಚರ್ಮವ್ಯಾಧಿ ತೊಂದರೆಗಳು ಕಂಡುಬರುತ್ತವೆ. 

ಎಳ್ಳಿನ ಜೊತೆಗೆ ಬೆಲ್ಲ  ಬೆರೆಸಿ ತಿನ್ನುವುದರಿಂದ ಶರೀರದಲ್ಲಿ ಕ್ಯಾಲ್ಷಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ ಮುಂತಾದ ರಾಸಾಯನಿಕ ವಸ್ತುಗಳು ಶರೀರಕ್ಕೆ ಲಭಿಸುತ್ತವೆ. ಹಾಗಾಗಿ ಈ ಸಂಕ್ರಮಣ ಕಾಲದಲ್ಲಿ ಎಳ್ಳು ಬೆಲ್ಲದ ಸೇವನೆ ಮಾಡುವುದು ಸೂಕ್ತ. ಪ್ರಕೃತಿಗೂ ನಮ್ಮ ಜೀವನ ಶೈಲಿಗೂ ಅವಿನಾಭಾವ ಸಂಬಂಧವಿದೆ. ಇದನ್ನು ಅರಿತು ನಾವು ಬಾಳಿದರೆ ಸ್ವರ್ಗ ಸುಖವನ್ನು ಪಡೆಯಬಹುದು ಎಂದು  ಹೇಳಿದರು.

ಸಂಗೀತ ಗಾಯಕಿ ರುದ್ರಾಕ್ಷಿಬಾಯಿ ಮತ್ತು ಅವರ ಶಿಷ್ಯ ವೃಂದದ ಗಾಯಕ ನಿರಂಜನ್‍ಪ್ರಸಾದ್ ಅವರು ಸಂಕ್ರಾಂತಿಯ ಸುಗ್ಗಿಯ ಹಾಡುಗಳು ಎಂಬ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.  

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ವಿ.ಲಲಿತ್‍ಕುಮಾರ್ ಜೈನ್, ಪ್ರಭುಸ್ವಾಮಿ ಹಿರೇಮಠ್, ಡಾ. ಎಂ. ಯು. ಎಂ. ಸಿದ್ದಯ್ಯ, ವೃಷಭ್ ಮೆಡಿಕಲ್‍ನ ಸುನೀಲ್‍ಕುಮಾರ್, ಶ್ರೀಮತಿ ವೀಣಾ ಪಾಲನ್‍ಕರ್, ವಿನೀತ ಪಾಲನ್‍ಕರ್ ಇತರರು ಭಾಗವಹಿಸಿದ್ದರು. 

error: Content is protected !!