ರಟ್ಟಿಹಳ್ಳಿ ತಾಲ್ಲೂಕಿನ ಹಳ್ಳೂರಿನಲ್ಲಿ ಚನ್ನಮಲ್ಲಿಕಾರ್ಜುನ ಶ್ರೀ
ಹೊನ್ನಾಳಿ, ಜ. 18- ಮನುಷ್ಯನ ಅನೇಕ ಸಂಕಷ್ಟ ದಿನಗಳು ಹಾಗೂ ಸಮಸ್ಯೆಗಳಿಗೆ ಕೆಲವು ಬಾರಿ ಅವರವರ ಮೌನವೇ ಪರಿಹಾರ ದೊರಕಿಸಿ ಕೊಡುತ್ತದೆ ಎಂಬುದು ನಾವೂ ಸೇರಿದಂತೆ ಕೆಲವರು ಅನುಭವಕ್ಕೆ ಒಳಗಾಗಿರುತ್ತಾರೆ. ಹಲವರು ಕೆಲ ಸಂದರ್ಭ ಮೌನವಾಗಿದ್ದು, ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ರಟ್ಟಿಹಳ್ಳಿ ತಾಲ್ಲೂಕು ಹಳ್ಳೂರು ಗ್ರಾಮದಲ್ಲಿ (ಎಂ.ಡಿ. ಶಂಕರನಹಳ್ಳಿ) ಮೂರು ದಿನಗಳ ಕಾಲ ನಡೆಸಿದ `ಮೌನ ಇಷ್ಟಲಿಂಗ ಪೂಜಾನುಷ್ಠಾನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಕೆಲವು ಬಾರಿ ಮನುಷ್ಯನಿಗೆ `ಮಾತು ಬೆಳ್ಳಿ ಮೌನ ಬಂಗಾರ’ ಎಂಬ ಯುಕ್ತಿ ಎಷ್ಟೊಂದು ವಾಸ್ತವ ಎಂಬುದಕ್ಕೆ ಕೆಲ ದೃಷ್ಟಾಂತಗಳೊಂದಿಗೆ ವಿವರಿಸಿದ ಶ್ರೀಗಳು, ಲಿಂ. ಚಂದ್ರಶೇಖರ ಸ್ವಾಮೀಜಿಗಳ ಸಂಕಲ್ಪದಂತೆ ವಿವಿಧ ಪವಿತ್ರ ಸ್ಥಳಗಳಲ್ಲಿ ಮುಂದುವರೆಸಿಕೊಂಡು ಬರುತ್ತಿದ್ದೇನೆ ಎಂದರು.
ತುಂಗಭದ್ರಾ ನದಿ ದಡದ ಆಂಜನೇಯ, ಈಶ್ವರ (ಶಂಕರ), ರಾಮಾನುಜಾಚಾರ್ಯರ ದೇವಸ್ಥಾನದ ಮಧ್ಯದಲ್ಲಿ ಮೂರು ದಿನಗಳಿದ್ದು, ಮೌನ ಅನುಷ್ಠಾನದಲ್ಲಿ ಕಾಲ ಕಳೆದಿರುವುದು ಆನಂದ, ಶಾಂತಿ, ಸಮಾಧಾನಗಳನ್ನು ಹೆಚ್ಚು ತಂದುಕೊಟ್ಟಿದೆ ಎಂದರು.
ಕೋಣಂದೂರು ಶ್ರೀ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಬ್ರಾಹ್ಮೀ ಮುಹೂರ್ತದಲ್ಲಿ ನಡೆಸಿದ ಹೊನ್ನಾಳಿ ಶ್ರೀಗಳ ಮೌನ ಇಷ್ಟಲಿಂಗ ಪೂಜಾನುಷ್ಠಾನ ಕಾರ್ಯಕ್ರಮ ಭಕ್ತರ ಕಲ್ಯಾಣಕ್ಕಾಗಿಯೇ ಹೊರತು, ಶ್ರೀಗಳ ಸ್ವಾರ್ಥಕ್ಕಾಗಿ ಅಲ್ಲ ಎಂಬುದನ್ನು ನಾವು-ನೀವೆಲ್ಲಾ ತಿಳಿಯಬೇಕಾಗಿದೆ ಎಂದು ಹೇಳಿದರು.
ಚಿಕ್ಕಕಬ್ಬಾರ ರೇವಣಸಿದ್ಧಯ್ಯ ಹಿರೇಮಠ ಉಪನ್ಯಾಸ ನೀಡಿದರು. ಕತ್ತಿಗಿ ಮಠದ ಚನ್ನಪ್ಪಸ್ವಾಮಿಗಳು, ಅತಿಥಿಗಳಾದ ನಿವೃತ್ತ ಉಪನ್ಯಾಸಕ ಬಸವರಾಜಪ್ಪ, ನ್ಯಾಮತಿ ಹವಳದ ಲಿಂಗರಾಜ್, ಹೊನ್ನಾಳಿ ಕುಮಾರಸ್ವಾಮಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಸಂತೋಷ್ ಪಾಟೀಲ್, ಹಾಲಸ್ವಾಮಿ, ಪ್ರಕಾಶಶಾಸ್ತ್ರಿ, ತಿಮ್ಮಯ್ಯ, ಜಗದೀಶ್, ಹಳ್ಳೂರು ಎಂ.ಡಿ. ಶಂರನಹಳ್ಳಿ ಹಿರೇಮಠಸ್ಥರು, ಪುರದಕೇರಿ, ಚಿಕ್ಕಕಬ್ಬಾರ, ಕಮಲಾಪುರ, ಚಟ್ನಹಳ್ಳಿ, ಹೊಳೆ ಹರಳಹಳ್ಳಿ, ಮೈದೂರ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.