ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ದೈಹಿಕ ಚಟುವಟಿಕೆ ಅಗತ್ಯ

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ದೈಹಿಕ ಚಟುವಟಿಕೆ ಅಗತ್ಯ

ವಿವೇಕ ಪೋಷಕರ ಆರೋಗ್ಯ ಕಾರ್ಯಕ್ರಮದಲ್ಲಿ ಮಧುಮೇಹ ತಜ್ಞ ಡಾ. ವಿ.ಜೆ.ಮಲ್ಲಿಕಾರ್ಜುನ್

ದಾವಣಗೆರೆ,ಜ.18-  ಆರೋಗ್ಯಕರ ಆಹಾರ, ಔಷಧೋಪಚಾರದ ಜೊತೆಗೆ ದೈಹಿಕ ಚಟುವಟಿಕೆಗಳು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬಹಳ ಅಗತ್ಯ ಎಂದು ಬಾಪೂಜಿ ಹೈಟೆಕ್ ಆಸ್ಪತ್ರೆಯ ಮಧುಮೇಹ ತಜ್ಞ ಡಾ.ವಿ.ಜೆ.ಮಲ್ಲಿಕಾರ್ಜುನ್ ತಿಳಿಸಿದರು.

ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ವಿವೇಕ ಪೋಷಕರ ಆರೋಗ್ಯ ಕಾರ್ಯಕ್ರಮದಲ್ಲಿ, ಸಕ್ಕರೆ ಕಾಯಿಲೆ ಕುರಿತಂತೆ  ವಿಶೇಷ ಉಪನ್ಯಾಸ ನೀಡಿದ ಅವರು, ಯಾರೇ ಆಗಲಿ 35 ವರ್ಷ ಆದ ಮೇಲೆ ಶುಗರ್ ಚೆಕ್ ಮಾಡಿಸಬೇಕು. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಸಿಹಿ ತಿನಿಸು ವಿಷವಿದ್ದ ಹಾಗೆ, ಅದನ್ನು ಬಿಟ್ಟು ಬಿಡಿ. ನಾರಿನ ಅಂಶವಿರುವ ಆಹಾರ ಸೇವಿಸಿ ಆದಷ್ಟು ಕಡಿಮೆ ಆಹಾರ ಸೇವಿಸಿ. ದಿನಕ್ಕೆ ಕನಿಷ್ಟ 30 ರಿಂದ 45 ನಿಮಿಷ ವಾಕ್ ಮಾಡಿ,  ವ್ಯಾಯಾಮ ಮಾಡಿ. ರಕ್ತದಲ್ಲಿ ಸಕ್ಕರೆ ನಿಯಂತ್ರಣದಲ್ಲಿ ಇರದಿದ್ದರೆ, ಕಣ್ಣು, ಕಾಲು ಕಿಡ್ನಿಗೆ ಹಾನಿಯಾಗುತ್ತದೆ ಆದ್ದರಿಂದ ಮಧುಮೇಹಿಗಳು ಎಚ್ಚರವಹಿಸಬೇಕು. ವರ್ಷಕ್ಕೆ ಒಮ್ಮೆಯಾದರೂ ಕಣ್ಣಿನ ಪರೀಕ್ಷೆ ಮಾಡಿಸಬೇಕು.

ಇದೇನು ಸಾಂಕ್ರಾಮಿಕ ಅಲ್ಲ. ಮನೆಯಲ್ಲಿ ಎಲ್ಲರೂ ಏನು ಊಟ ಮಾಡುತ್ತಾರೋ ಅದನ್ನೇ ನೀವೂ ಊಟ ಮಾಡಿ, ಸಿಹಿ ಹೆಚ್ಚಿರುವ ಮಾವಿನ ಹಣ್ಣು, ಹಲಸು, ಪಪ್ಪಾಯ, ಸಪೋಟ ಹಣ್ಣುಗಳನ್ನು ಬಿಟ್ಟು, ಕಿತ್ತಳೆ, ಮೊಸುಂಬೆ ಅಂತಹ ಕಡಿಮೆ ಸಕ್ಕರೆ ಅಂಶ ಇರುವ ಹಣ್ಣಗಳನ್ನು ಸೇವಿಸಿರಿ. ಹೆಚ್ಚಾಗಿ ನಾರಿನಂಶವಿರುವ ತರಕಾರಿ, ಬೇಳೆ ಕಾಳುಗಳನ್ನು ಸೇವಿಸುವಂತೆ ಸಲಹೆ ನೀಡಿದರು.

ಹೆಣ್ಣು ಮಕ್ಕಳಿಗೆ ಗರ್ಭಾವಸ್ಥೆಯಲ್ಲಿ ಬರುವ ಮಧುಮೇಹ ಪ್ರಸವದ ನಂತರ ಸರಿ ಹೋಗುತ್ತದೆ ಆದರೆ ಈ ಅವಧಿಯಲ್ಲಿ ಅವರು ಜಾಗೃತಿ ವಹಿಸಬೇಕು ಎಂದು ತಿಳಿಸಿದರು. 

ನಾವು ಸಕ್ಕರೆ ಬೆರೆಸಿದ ಆಹಾರ ಸೇವಿಸದೆ ಬೆಲ್ಲವನ್ನು ಬಳಸಿದರೆ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ.ಮಲ್ಲಿಕಾರ್ಜುನ್ ಸಕ್ಕರೆ, ಬೆಲ್ಲ ಎರಡೂ ಕಬ್ಬಿನಿಂದಲೇ ಆಗುವುದಲ್ಲವೇ ? ಎರಡೂ ಮಧು ಮೇಹಿಗಳು ಸೇವಿಸಬಾರದು ಎಂದರು.  

ಬಾಪೂಜಿ ಮಕ್ಕಳ ಆರೋಗ್ಯ  ಮತ್ತು  ಸಂಶೋಧನಾ ಕೇಂದ್ರದ ನಿರ್ದೇಶಕ  ನವಜಾತ ಶಿಶು ತಜ್ಞ ಡಾ. ಜಿ.ಗುರುಪ್ರಸಾದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಕ್ಕರೆ ಕಾಯಿಲೆ ಸಾಮಾನ್ಯ ಕಾಯಿಲೆಯಾಗಿದ್ದು, ಹೆದರುವ ಅವಶ್ಯಕತೆ ಇಲ್ಲ. ಆದರೆ ಭಾರತದಲ್ಲಿಯೇ ಹೆಚ್ಚಿನ ಮಧುಮೇಹಿಗಳು  ಇರುವುದು ದುರಂತವಾಗಿದೆ. ಇನ್ನು 10 ವರ್ಷದಲ್ಲಿ ದುಪ್ಪಟ್ಟಾಗುವ ಸಂಭವವಿದೆ  ಎಂದರು.

ಪ್ರಸ್ತುತ ಜನಿಸುವ ನೂರು ಮಕ್ಕಳಲ್ಲಿ 25 ಮಕ್ಕಳು ಕಡಿಮೆ ತೂಕವಿರುತ್ತದೆ. ಇಂತಹ ಮಕ್ಕಳಲ್ಲಿ ಯೇ ಮುಂದೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ  ಹೆಣ್ಣು ಮಕ್ಕಳು ಗರ್ಭಿಣಿ ಇದ್ದಾಗ ಪೌಷ್ಠಿಕ ಆಹಾರ ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೋಷಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ತಿಂಗಳ ಮೊದಲ ಹಾಗೂ ಕೊನೆಯ ಗುರುವಾರಗಳಂದು  ಈ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ಡಾ.ಗುರುಪ್ರಸಾದ್ ತಿಳಿಸಿದರು.

ಮಕ್ಕಳ ತಜ್ಞ ಬಾಣಾಪುರ ಮಠ, ಡಾ.  ಮುರುಘರಾಜ ಕೌಜಲಗಿ, ಡಾ.ಎಸ್.ಎಸ್.ಪ್ರಕಾಶ್, ಡಾ.ಸುರೇಶ್, ಕಾರ್ಯಕ್ರಮದ ಸಂಯೋಜಕಿ ಸಿ.ಎಂ.ಅಂಜಲಿ, ವ್ಯವಸ್ಥಾಪಕ ಎಸ್.ಎನ್.ಗುಬ್ಬಿ ಮತ್ತಿತರರು ಹಾಜರಿದ್ದರು.  

error: Content is protected !!