ಜಗಳೂರಿನ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀ
ಜಗಳೂರು, ಜ. 18 – ಶಿವಸಂಚಾರ ನಾಟಕಗಳಲ್ಲಿನ ತತ್ವ ಪದಗಳು, ಕಥೆಗಳು, ಮಾನವೀಯ ಮೌಲ್ಯಗಳನ್ನು ಸಾರುತ್ತವೆ ಎಂದು ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಶಿವಸಂಚಾರ ನಾಟಕೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮುಖ್ಯ ಮಂತ್ರಿಗಳಿಗೆ ಅಭಿನಂದನೆ ; ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾ ಮಯ್ಯನವರ ಸರ್ಕಾರ ಘೋಷಿಸಿದ್ದು ಸ್ವಾಗತಾರ್ಹ, ಅವರನ್ನು ಅಭಿನಂದಿಸುವುದಾಗಿ ತಿಳಿಸಿದ ಶ್ರೀಗಳು, ಇದರಿಂದ ಬಸವಣ್ಣನ ಸಾಧನೆ ಕೊಡುಗೆಗಳು, ಸಮಾಜಕ್ಕೆ ಪರಿಚಯವಾಗುತ್ತವೆ. ನಮ್ಮ ದೃಷ್ಠಿಯಲ್ಲಿ ವಿಶ್ವದ ಸಾಂಸ್ಕೃತಿಕ ನಾಯಕ ನಾಗಬೇಕಿದೆ ಎಂದು ತಿಳಿಸಿದರು.
ಶಿವಸಂಚಾರ ನಾಟಕೋತ್ಸವದಲ್ಲಿ ಅಭಿನಯಿಸಿದ ಜೊತೆಗಿರುವನು ಚಂದಿರ, ತಾಳಿಯ ತಕರಾರು, ಕಲ್ಯಾಣದ ಬಾಗಿಲು, ಮೂರು ನಾಟಕಗಳು ಅರ್ಥಪೂರ್ಣ ಕಥೆಗಳಾಗಿವೆ. ಇವುಗಳನ್ನು ತಾಲ್ಲೂಕಿನಲ್ಲಿ ಧಾರವಾಹಿ ವ್ಯಾಮೋಹ ತೊರೆದು ನಾಟಕ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿ ಪ್ರೇಕ್ಷಕರು ಆಗಮಿಸಿರುವುದು ಅನ್ಯ ತಾಲ್ಲೂಕುಗಳಿಗೆ ಚಾಟಿ ಬೀಸುವಂತಿದೆ ಎಂದು ಪ್ರಶಂಸಿದರು.
ಫೆ.2 ಮತ್ತು 3 ರಂದು ಚಿತ್ರದುರ್ಗ ಮತ್ತು ಚಿಕ್ಕಮಂಗಳೂರು ಎರಡು ಜಿಲ್ಲೆಗಳ ಒಂದಾಗಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ಹೇಳಿದರು.
ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಮನುಷ್ಯ ಇತರರಿಗೆ ಒಳಿತು ಬಯಸುವ ಜೊತೆಗೆ ತಾನು ಜೀವನದಲ್ಲಿ ಗಳಿಕೆಯ ಒಂದು ಭಾಗವನ್ನು ದಾನ ಮಾಡಬೇಕು. ಕಲಾವಿದನ ಬದುಕು ಶೋಚನೀಯ ಆರ್ಥಿಕ ನೆರವಿನೊಂದಿಗೆ ಕಲೆಯನ್ನು ಪ್ರೋತ್ಸಾಹಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಅಣಬೇರು ರಾಜಣ್ಣ, ಡಾ.ರವಿಕುಮಾರ್, ಜಿ.ಪಂ. ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್, ನಿವೃತ್ತ ಉಪನ್ಯಾಸಕ ಸುಭಾಷ್ ಚಂದ್ರ ಬೋಸ್, ಶಿವಣ್ಣಗೌಡ, ಶಿವಕುಮಾರ ನಾಟಕ ತಂಡದ ಸಂಚಾಲಕ, ರಾಜು, ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಪಲ್ಲಾಗಟ್ಟೆ ಶೇಖರಪ್ಪ ಮುಂತಾದವರು ಇದ್ದರು.