ಅಂದು ರಾಮ ಕಾಲ್ಪನಿಕ ಎಂದವರು ಇಂದು ನಾವು ಭಕ್ತರು ಎನ್ನುತ್ತಿದ್ದಾರೆ : ಸಿ.ಟಿ. ರವಿ
ದಾವಣಗೆರೆ, ಜ. 13 – ರಾಮ ಕಾಲ್ಪನಿಕ ವ್ಯಕ್ತಿ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರ ಕೊಟ್ಟವರು, ಇಂದು ನಾವು ರಾಮನ ಭಕ್ತರು ಎಂದು ಹೇಳುತ್ತಿದ್ದಾರೆ. ರಾವಣ ಮನಸ್ಥಿತಿಯ ಜನರು ರಾಮನ ವೇಶ ಧರಿಸಿ ಮೋಸ ಮಾಡಲು ಬರುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಟೀಕಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿಗಳ ಬಳಗ ಮತ್ತು ಜಿಲ್ಲಾ ಬಿಜೆಪಿ ಹಿರಿಯ ನಿಷ್ಠಾವಂತ ಕಾರ್ಯಕರ್ತರ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮೊಳಗೆ ಒಡಕು ತರುವ ಯತ್ನ ಹಾಗೂ ದುರುದ್ಧೇಶದ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಪರೋಕ್ಷವಾಗಿ ಟೀಕಿಸಿದ ಅವರು, ರಾಮ ಮಂದಿರ ನಿರ್ಮಾಣವನ್ನೇ ಸಹಿಸಲು ಆಗದವರು ಇಂದು ನಾವು ರಾಮನ ಭಕ್ತರು ಎಂದು ಹೇಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ನೀವು ಕೊಟ್ಟ ಪ್ರತಿ ಮತ ರಾಮ ಮಂದಿರ ನಿರ್ಮಾಣಕ್ಕೆ ಕಾರಣವಾಯಿತು. ಮೈ ಮರೆತರೆ ರಾಷ್ಟ್ರ ಮಂದಿರದ ನಾಶವೂ ಆಗಬಹುದು. ಹಾಗೆ ಆಗಬಾರದು ಎಂದಿದ್ದರೆ ಮೈ ಮರೆಯದೇ ರಾಷ್ಟ್ರಭಕ್ತಿಯ ಜಾಗೃತಿಯ ಜೊತೆಗೆ, ರಾಮ ಭಕ್ತಿಯನ್ನು ಹೃದಯದಲ್ಲಿಟ್ಟುಕೊಂಡು ಮತ್ತೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.
ಪ್ರತಿಯೊಂದು ಮತವೂ ರಾಷ್ಟ್ರಭಕ್ತಿಗೆ ಮೀಸಲಾಗಬೇಕು. ಜಾತಿಗೆ, ಹಣಕ್ಕೆ, ಕೊಡುವ ಭಿಕ್ಷೆಗೆ ಮತ ಚಲಾಯಿಸಬಾರದು ಎಂದು ರವಿ ಹೇಳಿದರು.
ಬಾಬರ್ ಬಿಡಲು ಆಗಲ್ಲ, ರಾಮನ ಜೊತೆ ನಿಲ್ಲಲೂ ಆಗಲ್ಲ
ಸ್ಪಷ್ಟತೆ ಇಲ್ಲದ ಕಾಂಗ್ರೆಸ್ನಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ : ಸಿ.ಟಿ. ರವಿ
ದಾವಣಗೆರೆ, ಜ. 13 – ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಖಿಲಾಫತ್ ಚಳುವಳಿ ಬೆಂಬಲಿಸಿ ದೇಶದ ವಿಭಜನೆಗೆ ಕಾರಣವಾಯಿತು. ಈಗ ರಾಮ ಮಂದಿರದ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದೇ ಸಣ್ಣತನದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಟೀಕಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತನಗೆ ರಾಮ ಬೇಕೋ ಅಥವಾ ಬಾಬರ್ ಬೇಕೋ ಎಂಬುದನ್ನು ನಿರ್ಧರಿಸಬೇಕು ಎಂದು ಹೇಳಿದರು.
ಆದರೆ, ಕಾಂಗ್ರೆಸ್ಗೆ ಬಾಬರ್ ಬಿಡಲು ಆಗುತ್ತಿಲ್ಲ. ರಾಮನ ಜೊತೆ ನಿಲ್ಲಲು ಆಗುತ್ತಿಲ್ಲ. ಅವರಿಗೆ ಬಾಬರ್ ಬೇಕು ಎಂದಾದರೆ ಜಾಗ ಇಲ್ಲ. ರಾಮ ಬೇಕು ಎಂದರೆ ಸಣ್ಣತನದ ರಾಜಕಾರಣ ನಿಲ್ಲಿಸಬೇಕು. ಕೋಟ್ಯಂತರ ಜನ ರಾಮ ಮಂದಿರ ಬಯಸಿದ್ದಾರೆ. ಈ ವಿಷಯದಲ್ಲಿ ಮೊಸರಲ್ಲಿ ಕಲ್ಲು ಹುಡುಕಬಾರದು ಎಂದರು.
ಮಂದಿರ ಕಾರ್ಯ ಆಗುತ್ತಿರುವುದನ್ನು ನೋಡಿ ಸಂತೋಷ ಪಡಬೇಕು. ಅದನ್ನು ಬಿಟ್ಟು ಯಾರು ಮಾಡುತ್ತಾರೆ? ಯಾಕೆ ಮಾಡುತ್ತಾರೆ? ಈಗ ಯಾಕೆ ಮಾಡುತ್ತಾರೆ? ಎಂಬ ಕೊಂಕು ಮಾತುಗಳನ್ನು ಜನ ಒಪ್ಪುವುದಿಲ್ಲ. ಈ ವಿಷಯದಲ್ಲಿ ಸ್ಪಷ್ಟತೆ ಬಂದರೆ ಅವರಿಗೆ ಹಾಗೂ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ರವಿ ಹೇಳಿದರು.
ನಾವು ಕಾಂಗ್ರೆಸ್ನವರ ಭಕ್ತಿಯನ್ನು ಪ್ರಶ್ನಿಸುವುದಿಲ್ಲ. ಅದು ಭಕ್ತರು ಮತ್ತು ಭಗವಂತನ ನಡುವೆ ಇರುವ ಸಂಬಂಧ. ಆದರೆ, ಕಾಂಗ್ರೆಸ್ ಮಾಡಿದ ರಾಜಕಾರಣವನ್ನು ಮಾತ್ರ ಪ್ರಶ್ನಿಸುತ್ತೇವೆ. 1992ರಲ್ಲಿ ಅವರು ಬಿಜೆಪಿಯ ನಾಲ್ಕು ರಾಜ್ಯಗಳ ಸರ್ಕಾರ ವಜಾ ಮಾಡಿದ್ದು ರಾಜಕೀಯ. ರಾಮ ಕಾಲ್ಪನಿಕ ವ್ಯಕ್ತಿ ಎಂದು ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದು ರಾಜಕೀಯ. 1947ರಲ್ಲೇ ಅಯೋಧ್ಯೆ, ಕಾಶಿ ಹಾಗೂ ಮಥುರಾಗಳ ಸಮಸ್ಯೆ ಬಗೆಹರಿಸಲು ಅವಕಾಶವಿದ್ದರೂ ಕ್ರಮ ತೆಗೆದುಕೊಳ್ಳದೇ ಇದ್ದದ್ದು ರಾಜಕೀಯ ಎಂದು ಆರೋಪಿಸಿದರು.
ಬಿಜೆಪಿ ರಾಷ್ಟ್ರಕಾರಣಕ್ಕಾಗಿ ರಾಮ ಮಂದಿರ ಬಯಸುತ್ತಿದೆ. ಇದರಲ್ಲಿ ರಾಜಕಾರಣ ಇಲ್ಲ. ರಾಮ ಮಂದಿರವೇ ರಾಷ್ಟ್ರ ಮಂದಿರವೂ ಆಗಿದೆ. ರಾಷ್ಟ್ರ ಮಂದಿರ ಕಲ್ಪನೆಯಿಂದ ಸನಾತನ ಧರ್ಮದ ಪುನರುತ್ಥಾನ ಆಗಬೇಕು, ರಾಮ ರಾಜ್ಯ ಆಗಬೇಕು ಎಂಬ ಆಶಯದಿಂದ ರಾಮ ಮಂದಿರ ನಿರ್ಮಿಸಲಾಗುತ್ತಿದೆ ಎಂದವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಜವಾದ ರಾಮನ ಭಕ್ತರಾಗಲಿ. ಇದಕ್ಕಾಗಿ ಅವರ ಮೇಲೆ ಯಾರದೇ ನಿರ್ಬಂಧ ಇಲ್ಲ. ಆದರೆ, ರಾಮ ಮಂದಿರಕ್ಕೆ ದೇಣಿಗೆ ಕೊಡಲ್ಲ, ಯಾಕೆ ಕೊಡಬೇಕು? ಎಂದು ಹೇಳಿದ್ದು ಮಾಧ್ಯಮಗಳೇ ಅವರಿಗೆ ನೆನಪಿಸಬೇಕು ಎಂದು ಲೇವಡಿ ಮಾಡಿದರು.
ಬಸವಣ್ಣನವರ ವಚನ ತಾತ್ಪರ್ಯವೇ ರಾಮ ರಾಜ್ಯದ ವಾಸ್ತವಿಕತೆ
ಎಲ್ಲರನ್ನೂ ನಮ್ಮವರು ಎಂದು ಸ್ವೀಕರಿಸುವುದೇ ರಾಮ ರಾಜ್ಯ. ಬಸವಣ್ಣನವರ ವಚನಗಳ ತಾತ್ಪರ್ಯವೇ ರಾಮರಾಜ್ಯದ ವಾಸ್ತವಿಕತೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದರು.
ಶಬರಿ ಕೊಟ್ಟ ಎಂಜಲು ಹಣ್ಣನ್ನು ಚಪ್ಪರಿಸಿ ತಿಂದವನು ರಾಮ. ರಾಮರಾಜ್ಯ ಎಂದರೆ ತಾಲಿಬಾನ್ ಥರ ಅಲ್ಲ. ಎಲ್ಲರನ್ನೂ ನಮ್ಮ ವರು ಎಂದು ಸ್ವೀಕರಿಸುವುದೇ ರಾಮರಾಜ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಅಟಲ್ ಬಿಹಾರಿ ವಾಜಪೇಯಿ ಬಿಜೆಪಿಯ ಮೊದಲ ಪ್ರಧಾನಿ. ಸರ್ವ ಶಿಕ್ಷಣ ಅಭಿಯಾನ, ಸುವರ್ಣ ಚತುಷ್ಪಥ ರಸ್ತೆ, ವಾಂಬೆ ವಸತಿ ಯೋಜನೆ, ಗ್ರಾಮ ಸಡಕ್ ಯೋಜನೆ ಮತ್ತಿತರೆ ಯೋಜನೆಗಳಿಂದ ದೇಶದ ಪ್ರಗತಿಗೆ ಕಾರಣರಾದರು ಎಂದರು.
ವಾಜಪೇಯಿ ಅವರ ಜನ್ಮದಿನವನ್ನು ಸರ್ಕಾರದ ವತಿಯಿಂದಲೇ ಆಚರಿಸುವಂತಾಗಬೇಕು. ಮುಂದಿನ ವರ್ಷ ವಾಜಪೇಯಿ ಅವರ 100ನೇ ಜನ್ಮದಿನ ಬರಲಿದೆ. ಆ ವೇಳೆಯ ಒಳಗೆ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮೂರ್ನಾಲ್ಕು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಬಿಜೆಪಿಯ ಕಾರ್ಯಕರ್ತರು ಯಾವುದೇ ಭೇದವಿಲ್ಲದೇ ಒಗ್ಗಟ್ಟಿನಿಂದ ಗೆಲುವಿಗಾಗಿ ಶ್ರಮಿಸಬೇಕು. ಆಂತರಿಕವಾಗಿ ಏನೇ ಸಮಸ್ಯೆ ಇದ್ದರೂ, ಲೋಕಸಭಾ ಚುನಾವಣೆಯಲ್ಲಿ ನಮ್ಮ ಧರ್ಮ ಹಾಗೂ ಸಂಸ್ಕೃತಿಗಾಗಿ ಒಂದಾಗಬೇಕು ಎಂದು ಹೇಳಿದರು.
ಹಿರಿಯ ನಿಷ್ಠಾವಂತ ಬಿಜೆಪಿ ಬಳಗದ ಜಿಲ್ಲಾಧ್ಯಕ್ಷ ಎಂ.ಪಿ. ಕೃಷ್ಣಮೂರ್ತಿ ಪವಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಪಾಲಿಕೆ ಉಪಮೇಯರ್ ಯಶೋಧ ಹೆಗ್ಗಪ್ಪ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಮುಖಂಡರಾದ ಜಯಪ್ರಕಾಶ್ ಅಂಬರ್ಕರ್, ಯಶವಂತರಾವ್ ಜಾಧವ್, ಕೆ.ಬಿ. ಕೊಟ್ರೇಶ್, ಡಾ. ರವಿಕುಮಾರ್, ಜಿ.ಕೆ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.