ದಾವಣಗೆರೆ, ಜ. 11- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಗೃಹ ಕಚೇರಿಗೆ ಬೈಕ್ ರ್ಯಾಲಿ ಮೂಲಕ ತೆರಳಿ ಮನವಿ ಸಲ್ಲಿಸಲಾಯಿತು.
ನಗರದ ಸರ್ಕಾರಿ ನೌಕರರ ಸಮುದಾಯ ಭವನದ ಬಳಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಬೈಕ್ ರಾಲಿಗೆ ಚಾಲನೆ ನೀಡಿದರು. ಲಕ್ಷ್ಮಿಫ್ಲೋರ್ ಮಿಲ್ ರಸ್ತೆ ಮೂಲಕ ಸಂಚರಿಸಿದ ರಾಲಿಯು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗೃಹ ಕಚೇರಿಯ ಮುಂಭಾಗ ಮುಕ್ತಾಯಗೊಂಡಿತು. ಇದೇ ವೇಳೆ ರಾಜ್ಯ ಏಳನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸುವುದು. ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದು, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಎಂ.ವಿ. ರುದ್ರಪ್ಪ, ಬಸವರಾಜ್, ಸಿದ್ಧರಾಮಪ್ಪ, ವೀರೇಶ್ ಒಡೇನಪುರ, ಬಿ. ಪಾಲಾಕ್ಷಿ, ಗುರುಮೂರ್ತಿ, ಬಿ.ಆರ್. ತಿಪ್ಪೇಸ್ವಾಮಿ, ಮಂಜಮ್ಮ ಮತ್ತಿತರರು ಪಾಲ್ಗೊಂಡಿದ್ದರು.