ಅಧ್ಯಾತ್ಮದ ನೆಲೆಗಟ್ಟಿನಲ್ಲಿ ಸಮಾಜ ತಿದ್ದುವ ಕೆಲಸ ಮಾಡಿದ ಕನಕದಾಸರು

ಅಧ್ಯಾತ್ಮದ ನೆಲೆಗಟ್ಟಿನಲ್ಲಿ ಸಮಾಜ ತಿದ್ದುವ ಕೆಲಸ ಮಾಡಿದ ಕನಕದಾಸರು

ಹರಪನಹಳ್ಳಿಯಲ್ಲಿನ ಕನಕದಾಸರ ಜಯಂತ್ಯೋತ್ಸವವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ

ಹರಪನಹಳ್ಳಿ, ಜ. 7 – ಅಧ್ಯಾತ್ಮದ ನೆಲೆ ಗಟ್ಟಿನಲ್ಲಿ ದಾಸ ಶ್ರೇಷ್ಟ ಕನಕದಾಸರು ಸಮಾಜ ತಿದ್ದುವ ಕೆಲಸ ಮಾಡಿದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ತಿಳಿಸಿದ್ದಾರೆ.

ಅವರು ಪಟ್ಟಣದ ಹಳೆ ಬಸ್‌ ನಿಲ್ದಾಣದಲ್ಲಿರುವ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ತಾಲ್ಲೂಕು ಕನಕ ನೌಕರರ ಸಂಘ, ಬೀರೇಶ್ವರ ಕುರುಬ ಸಂಘ ಹಾಗೂ ಯುವ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಕ್ತ ಕನಕ ದಾಸರ 536ನೇ ಜಯಂತ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.

16ನೇ ಶತಮಾನದ ಕಾಲ ಘಟ್ಟದಲ್ಲಿ ಜಾತಿ ವ್ಯವಸ್ಥೆ ವಿರುದ್ದ ಧ್ವನಿ ಎತ್ತಿದ ಕನಕದಾಸರು, ಭಕ್ತಿ ಚಳುವಳಿ ಮೂಲಕ ಜನರಿಗೆ ಅರಿವು ಮೂಡಿಸಿದರು. ಎಲ್ಲಾ ಮಹನೀಯರ, ದಾರ್ಶನಿಕರ ಆಶೋತ್ತರ ಮೇಲು-ಕೀಳು ಇರದೆ ಸಮ ಸಮಾಜ ನಿರ್ಮಾಣವಾಗಬೇಕು ಎಂಬುದಾಗಿತ್ತು ಎಂದು ಅವರು ತಿಳಿಸಿದರು. ಎಲ್ಲಾ ಸಮಸ್ಯೆಗಳಿಗೆ ಮೂಲ ಮಂತ್ರ ಶಿಕ್ಷಣ, ಶಿಕ್ಷಣಕ್ಕಿಂತ ದೊಡ್ಡ ಅಸ್ತ್ರ ಇನ್ನೊಂದಿಲ್ಲ, ಎಲ್ಲಿ ನಿರಂತರ ಶಿಕ್ಷಣ ಇರುತ್ತೋ ಅಲ್ಲಿ ಮೌಢ್ಯ, ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.

ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್‌ ಮಾತನಾಡಿ, ಎಲ್ಲಾ ಜಾತಿ, ಜನಾಂಗದವರನ್ನು ಸೇರಿಸಿಕೊಂಡು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲ್ಯಾಘನೀಯ ಎಂದು ಹೇಳಿದರು.

ಕುರುಬ ಸಂಘದ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಬಿ. ದುರುಗಪ್ಪ ಮಾತನಾಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದೇ ಪೋಷಕರು ದೇಶಕ್ಕೆ ನೀಡುವ ಕೊಡುಗೆ ಎಂದರು. ಅಧ್ಯಕ್ಷತೆಯನ್ನು ಬೀರೇಶ್ವರ ಕುರುಬ ಸಂಘದ ಅಧ್ಯಕ್ಷ ಗೋಣಿಬಸಪ್ಪ ವಹಿಸಿದ್ದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌. ರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಉಪನ್ಯಾಸಕ ಕೆ.ಎಂ. ಹುಚ್ಚರಾಯಪ್ಪ ಉಪನ್ಯಾಸ ನೀಡಿದರು.

ಕನಕ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಹರಿಂದ್ರಾಳ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬಾಗಲರ್‌, ಬೀರೇಶ್ವರ ಕುರುಬ ಸಂಘದ ಪ್ರ. ಕಾರ್ಯದರ್ಶಿ ಎಚ್‌. ಪರಶುರಾಮ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಜಿ. ಪದ್ಮಲತಾ, ಸಾಬಳ್ಳಿ ಜಂಬಣ್ಣ, ಶಿಕ್ಷಕರ ಸಂಘದ ತಾ. ಅಧ್ಯಕ್ಷ ಬಿ. ರಾಜಶೇಖರ, ಕಾರ್ಯದರ್ಶಿ ನಟರಾಜ, ಶಿಕ್ಷಕರ ಹಾಗೂ ಪತ್ತಿನ ಸಂಘದ ಪದಾಧಿಕಾರಿಗಳಾದ ಚಂದ್ರಮೌಳಿ, ದೇವೇಂದ್ರಗೌಡ, ಉಸ್ಮಾನ್, ಪ್ರಭು ಹಾಗೂ ಬಸವರಾಜ ಹುಲಿಯಪ್ಪನವರ್‌, ಜೆ. ಜುಂಜಪ್ಪ, ಮಡ್ಡಿ ನಾಗರಾಜ,
ಎಂ.ಎಂ. ಚಂದ್ರಪ್ಪ, ಶಿಕ್ಷಕರಾದ ಮಹಾದೇವಮ್ಮ, ಶ್ರೀದೇವಿ ಡೊಳ್ಳಿನ, ವೈ.ಕೆ.ಡಿ ಸಂತೋಷಕುಮಾರ, ಸಿ. ಬಸವರಾಜ, ಬಿ.ಎಚ್‌. ಪ್ರಭಾಕರ್ ಇತರರು ಹಾಜರಿದ್ದರು.

error: Content is protected !!