ಉತ್ತಮ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬೇಕು

ದಾವಣಗೆರೆ ತಾಲ್ಲೂಕು ಕಸಾಪದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಜೆ.ಬಿ. ರಾಜ್

ದಾವಣಗೆರೆ, ಜ. 7- ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಿ ಮಾಜಿ ಪುರಸಭಾ ಪದವಿ ಪೂರ್ವ ಕಾಲೇಜು ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಸಹಯೋಗದಲ್ಲಿ ಶಾಲಾ – ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  

ದತ್ತಿ ಕಾರ್ಯಕ್ರಮದಲ್ಲಿ   ವಿದ್ಯಾರ್ಥಿ  ಜೀವನದಲ್ಲಿ ಧನಾತ್ಮಕ ಚಿಂತನೆಗಳು ಎಂಬ ವಿಷಯ ಕುರಿತು ಡಿ.ಆರ್.ಎಂ. ಕಾಲೇಜಿನ ನಿವೃತ್ತ  ಪ್ರಾಂಶುಪಾಲ ಡಾ|| ಜೆ.ಬಿ. ರಾಜ್  ಉಪನ್ಯಾಸ ನೀಡುತ್ತಾ,  ಹಲವಾರು ಜೀವಂತ ಉದಾಹರಣೆ ಗಳನ್ನು ವಿದ್ಯಾರ್ಥಿಗಳಿಗೆ ಕುತೂಹಲಕಾರಿಯಾಗಿ ತಿಳಿಸಿದರು. ಅವರಲ್ಲಿ ಆಸಕ್ತಿ ಕೆರಳಿಸಿ ಉತ್ತಮ ಚಿಂತನೆಗಳಲ್ಲಿ ತಾವೂ ತೊಡಗುವಂತೆ ಸ್ಫೂರ್ತಿ ತುಂಬಿದರು. ಹಲವಾರು ಧನಾತ್ಮಕ ಚಿಂತನೆಗಳ ನಿದರ್ಶನಗಳನ್ನು ನೀಡುತ್ತಾ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿದರು.

ಕಾಲೇಜಿನ ಉಪಪ್ರಾಚಾರ್ಯ ನಾಗರಾಜ್ ನಾಯಕ್ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು-ನುಡಿ ಸಂಸ್ಕೃತಿ ಶಿಲ್ಪ ಕಲೆ, ಸಾಹಿತ್ಯ ಅಭಿರುಚಿಯನ್ನು ಶಾಲಾ-ಕಾಲೇಜು ಅಂಗಳ ದಲ್ಲಿ ಬಿಂಬಿಸುವ ಕೆಲಸವನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಉಗಮ ಮತ್ತು ಕಾರ್ಯ ವೈಖರಿಯನ್ನು ವಿವರಿಸಿ ಕನ್ನಡ ಭಾಷೆಯ ಬಳಕೆ ಮತ್ತು ಬೆಳವಣಿಗೆಯ ಬಗ್ಗೆ ವಿವರಿಸಿ ದ್ದರು. ಕಾಲೇಜಿನ ಪ್ರಾಚಾರ್ಯ ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ನಾಗರಿಕರ ಸಹಾಯವಾಣಿಯ  ನವೀನ್ ಕುಮಾರ್  ಹಿರಿಯ ನಾಗರಿಕರಿಗಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ  ದಾಗಿನಕಟ್ಟೆ ಪರಮೇಶ್ವರಪ್ಪ ಹಾಗೂ ನಿರ್ದೇಶಕರಾದ ಶ್ರೀಮತಿ ಕೆ.ಜಿ. ಸೌಭಾಗ್ಯ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ಓಹಿಲೇಶ್ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಡಾ.  ಜಯಪ್ಪ ಕುರುಬರ   ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಯು.ಎನ್. ಉಮಾದೇವಿ ವಂದಿಸಿದರು.

error: Content is protected !!